ಬಿಎಸ್ಎಫ್, ಪಾಕ್ ರೇಂಜರ್ ಗಳ ಸಭೆ: ಭಾರತದಿಂದ ಪಾಕಿಸ್ತನಕ್ಕೆ ನಿರ್ದಯ ಕ್ರಮದ ಎಚ್ಚರಿಕೆ
ಶ್ರೀನಗರ: ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿ 6 ತಿಂಗಳ ನಂತರ ಮೊದಲ ಬಾರಿಗೆ ಗಡಿ ಭದ್ರತಾ ಸಿಬ್ಬಂದಿ ಹಾಗೂ ಪಾಕಿಸ್ತಾನ ರೇಂಜರ್ ಗಳ ಸಭೆ ನಡೆದಿದ್ದು, ಯೋಧರ ಹತ್ಯೆಯನ್ನು ಭಾರತ ಖಂಡಿಸಿದ್ದು, ಪಾಕಿಸ್ತಾನದ ಉದ್ಧಟತನ ಮುಂದುವರೆದರೆ ನಿರ್ದಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಪಾಕಿಸ್ತಾನದ ರೇಂಜರ್ ಗಳ ಮನವಿಯ ಮೇರೆಗೆ ಗಡಿಯಲ್ಲಿ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆದಿದ್ದು, ತನ್ನ ಯೋಧರ ಹತ್ಯೆ ನಡೆಸುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ಉದ್ಧಟತನ, ಕದನ ವಿರಾಮ ಉಲ್ಲಂಘನೆ ಮುಂದುವರೆದರೆ ಭಾರಿ ಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಪಾಕ್ ರೇಂಜರ್ ಗಳಿಗೆ ಭಾರತದ ಕಮಾಂಡರ್ ಗಳು ಎಚ್ಚರಿಸಿದ್ದಾರೆ.
ಜಮ್ಮು ಸೆಕ್ಟರ್ ನ ಡಿಐಜಿ ಪಿಎಸ್ ಧೀಮನ್ ನೇತೃತ್ವದಲ್ಲಿ 17 ಅಧಿಕಾರಿಗಳು ಧ್ವಜ ಸಭೆಯಲ್ಲಿ ಭಾಗವಹಿಸಿ, ಸುಮಾರು ಒಂದು ವರೆ ಗಂಟೆಯ ವರೆಗೆ ಪಾಕ್ ರೇಂಜರ್ ಗಳೊಂದಿಗೆ ಸಭೆ ನಡೆದಿದೆ ಎಂದು ತಿಳಿದುಬಂದಿದೆ.