ಮಹಾರಾಷ್ಟ್ರ ಸಚಿವ ವಿನೋದ್ ತಾವ್ಡೆ
ಮುಂಬೈ: ಮುಂಬೈ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬಸ್ಥರಿಗೆ ರೂ.5 ಲಕ್ಷ ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಚಿವ ವಿನೋದ್ ತಾವ್ಡೆಯವರು, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ರೂ.5 ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ದುರ್ಘಟನೆಯಲ್ಲಿ ಗಾಯಗೊಂಡಿರುವ ಜನರ ವೈದ್ಯಕೀಯ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಪ್ರಕರಣ ಸಂಬಂಧವನ್ನು ಮಹಾರಾಷ್ಟ್ರ ಸರ್ಕಾರ ಹಾಗೂ ರೈಲ್ವೇ ಸಚಿವಾಲಯ ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
ರೈಲ್ವೇ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಈಗಷ್ಟೇ ಮುಂಬೈಗೆ ಆಗಮಿಸಿದ್ದೇನೆ. ದುರಂತದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬಹಳವನ್ನು ನೋವನ್ನು ತಂದಿದೆ. ಘಟನಾ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಮುಖ್ಯ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ದುರ್ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮುಂಬೈ ಕಾಲ್ತುಳಿತದಲ್ಲಿ ಬಹಳ ಸಂಖ್ಯೆಯಲ್ಲಿ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ, ಘಟನೆಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಮುಂಬೈ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದ ಪರಿಸ್ಥಿತಿಯನ್ನು ಸುಧೀರ್ಘವಾಗಿ ಅವಲೋಕಿಸುತ್ತಿದ್ದೇನೆ. ಪಿಯೂಷ್ ಗೋಯಲ್ ಅವರು ಪರಿಸ್ಥಿತಿ ಅವಲೋಕಿಸಲು ಮುಂಬೈಗೆ ಭೇಟಿ ನೀಡಿದ್ದಾರೆಂದು ತಿಳಿಸಿದ್ದಾರೆ.