ಮುಂಬೈ: ರೈಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಕಾಲ್ತುಳಿತ ಸಂಭವಿಸಿ 23 ಮಂದಿ ಮೃತಪಟ್ಟ ನಂತರ ಎಚ್ಚೆತ್ತುಕೊಂಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು, ದುರಂತ ಸಂಭವಿಸಿದ ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ನಿಲ್ದಾಣಕ್ಕೆ ಹೆಚ್ಚುವರಿ ಎಸ್ಕಲೇಟರ್ ಗಳನ್ನು ಮಂಜೂರು ಮಾಡಿದ್ದಾರೆ.
ಕಾಲ್ತುಳಿತ ಸಂಭವಿಸಿದ ನಂತರ ಇಂದು ಮುಂಬೈ ಭೇಟಿ ನೀಡಿ, ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಗೋಯಲ್ ಅವರು, ಯೋಜನೆಗಳ ಜಾರಿ ಮತ್ತು ಸ್ಥಳೀಯ ಕಾರ್ಯಾಚರಣೆಗೆ ಚುರುಕು ಮುಟ್ಟಿಸುವುದಕ್ಕಾಗಿ ಮುಖ್ಯ ಕಚೇರಿಯ 200 ಸಿಬ್ಬಂದಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಫಿನ್'ಸ್ಟೋನ್ ರೈಲ್ವೆ ನಿಲ್ದಾಣ ಸೇರಿದಂತೆ ಮುಂಬೈನ ಕೆಲ ಹೆಚ್ಚು ಜನ ಸಂದಣಿ ಇರುವ ರೈಲ್ವೆ ನಿಲ್ದಾಣಗಳಿಗೆ ಹೆಚ್ಚುವರಿ ಎಸ್ಕಲೇಟರ್ ಗಳನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 10.40ರ ಸುಮಾರಿಗೆ ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 23 ಮಂದಿ ಮೃತಪಟ್ಟಿದ್ದು, ದುರಂತಕ್ಕೆ ರೈಲ್ವೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದೆ.