ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ
ಮುಂಬೈ: ಮುಂಬೈ ರೈಲ್ವೇ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿದ ಬಳಿಕವಷ್ಟೇ ಬುಲೆಟ್ ರೈಲು ಅಭಿವೃದ್ಧಿ ಕುರಿತ ಕಾರ್ಯಗಳಿಗೆ ಅವಕಾಶ ನೀಡುತ್ತೇವೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಯವರು ಶನಿವಾರ ಹೇಳಿದ್ದಾರೆ.
ಮುಂಬೈ ಎಲ್ಫಿನ್'ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಮುಂಬೈ ರೈಲ್ವೇ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಬಳಿಕವಷ್ಟೇ ಬುಲೆಟ್ ರೈಲು ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮುಂಬೈನಲ್ಲಿ ಮಳೆಯಾಗುತ್ತಿರುವುದು ಇದು ಮೊದಲನೇನಲ್ಲ. ಭಾರೀ ಮಳೆಯಿಂದಾಗಿ ದುರಂತ ಸಂಭವಿಸಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರಸ್ತುತ ಮುಂಬೈ ರೈಲ್ವೇ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸದ ಹೊರತು ಬುಲೆಟ್ ರೈಲು ಕುರಿತ ಕಾರ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೈಲ್ವೇ ಇಲಾಖೆ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ನಮಗೆ ಉಗ್ರರು ಹಾಗೂ ಪಾಕಿಸ್ತಾನದಂತಹ ಶತ್ರುಗಳ ಅಗತ್ಯವೇನಿದೆ? ಜನರನ್ನು ಸಾಯಿಸಲು ರೈಲ್ವೇ ಇಲಾಖೆಯೇ ಸಾಕು ಎಂದಿದ್ದಾರೆ.
ಮುಂಬೈ ಸ್ಥಳೀಯ ರೈಲುಗಳ ಕುರಿತಂತೆ ಹಾಗೂ ರೈಲ್ವೇ ನಿಲ್ದಾಣಗಳ ಸಮಸ್ಯೆಗಳ ಕುರಿತಂತೆ ಪಟ್ಟಿಯೊಂದನ್ನು ಅಂತಿಮ ಗಡುವಿನ ದಿನಾಂಕದೊಂದಿಗೆಯೇ ಅ.5 ರಂದು ನೀಡಲಾಗುತ್ತದೆ. ಒಂದು ವೇಳೆ ಇಲಾಖೆ ಕ್ರಮ ಕೈಗೊಳ್ಳದೇ ಹೋಗಿದ್ದೇ ಆದರೆ, ನಾವು ನಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತೇವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.