ಮುಂಬೈ: ರಾಜ್ಯದ ಜನತೆಯ ಹಿತ ಕಾಯುವುದಕ್ಕಾಗಿ ಶಿವಸೇನೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಂದುವರೆಯಲಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶನಿವಾರ ಶಿವಸೇನೆ ಸ್ಪಷ್ಟಪಡಿಸಿದೆ. ಈ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮುನಿಸಿಕೊಂಡಿರುವ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳಲಿದೆ ಎಂಬ ವದಂತಿಗಳಿಗೆ ತೆರೆ ಎಳೆಯಲಾಗಿದೆ.
ಇತ್ತೀಚಿಗಷ್ಟೇ ರಾಜ್ಯ ಸರ್ಕಾರದಲ್ಲಿ ಮುಂದುವರೆಯಬೇಕೆ ಅಥವಾ ಬೇಡವೇ ಎಂಬುದರ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರೌತ್ ಅವರು ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ವಿಧಾಸಭೆ ಚುನಾವಣೆಗೆ ಇನ್ನೂ ಎರಡು ಬಾಕಿ ಇರುವಾಗ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳುವುದಿಲ್ಲ. ಜನರ ಹಿತ ಕಾಪಾಡುವುದಕ್ಕಾಗಿ ಅಧಿಕಾರದಲ್ಲಿ ಮುಂದುವರೆಯುತ್ತೇವೆ ಎಂದು ಹೇಳಿದೆ.
ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದ ಶಿವಸೇನೆ 12 ಸಚಿವರನ್ನು ಹೊಂದಿದೆ. ಅಲ್ಲದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲೂ ಓರ್ವ ಸಚಿವರನ್ನು ಹೊಂದಿದೆ. ಆದರೂ ಇತ್ತೀಚಿಗೆ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ದೇಶದಾದ್ಯಂತ ತೀವ್ರ ಅಸಮಾಧಾನವಿದೆ. ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಅಸಮರ್ಥವಾಗಿರುವ ಸರ್ಕಾರದ ಭಾಗವಾಗಲು ಶಿವಸೇನಾ ಇಚ್ಛಿಸುವುದಿಲ್ಲ. ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಜತೆಗಿನ ಮೈತ್ರಿಯನ್ನು ಮುಂದುವರಿಸುವ ಕುರಿತು ಅತಿ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ. ಕಾದು ನೋಡಿ ಎಂದು ಹೇಳಿ ಶಿವಸೇನೆ ಅಚ್ಚರಿ ಮೂಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics