ಕುಟುಂಬ ಸದಸ್ಯನನ್ನು ಕಳೆದುಕೊಂಡು ದುಃಖದಲ್ಲಿ ಸಂಬಂಧಿಕರು
ಮುಂಬೈ: ವಾಣಿಜ್ಯ ನಗರ ಮುಂಬೈನ ಎಲ್ಫಿನ್'ಸ್ಟೋನ್ ರೈಲು ನಿಲ್ಧಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಬಲಿಯಾದವರ ಶವಗಳನ್ನಿರಿಸಿದ್ದ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯರು, ಶವಗಳನ್ನು ಗುರ್ತಿಸುವ ಸಲುವಾಗಿ ಹಣೆಗಳ ಮೇಲೆ ನಂಬರ್ ಹಾಕಿದ್ದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ.
ಶವಗಳ ಹಣೆ ಮೇಲೆ ನಂಬರ್ ಹಾಕಿದ ವೈದ್ಯರ ನಡೆಗೆ ಖಂಡಿಸಿ ವೈದ್ಯರೊಬ್ಬರಿಗೆ ಶಿವಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ದಾಳಿ ಕುರಿತೆತ ಪ್ರತಿಕ್ರಿಯೆ ನೀಡಿರುವ ವೈದ್ಯ ಹರಿ ಪಥಕ್ ಎಂಬುವವರು, ಕಳೆದ ರಾತ್ರಿ ಕಚೇರಿಗೆ 5-6 ಮಂದಿಯಿದ್ದ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ದಾಳಿ ನಡೆಸಿದವರು ಶಿವಸೇನೆಯ ಸದಸ್ಯರಾಗಿದ್ದಾರೆ. ಕಚೇರಿಯೊಳಗೆ ನುಗ್ಗಿದ ಗುಂಪು ನನ್ನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಒಬ್ಬ ವ್ಯಕ್ತಿಯ ಬಳಿ ಶಿವಸೇನೆಯ ಸದಸ್ಯತ್ವದ ಗುರುತಿನ ಚೀಟಿ ಇತ್ತು ಎಂದು ಹೇಳಿದ್ದಾರೆ.
ಶವಗಳ ಹಣೆಗಳ ಮೇಲೆ ನಂಬರ್ ಗಳನ್ನು ಹಾಕಿರುವುದಕ್ಕೆ ಇದೀಗ ಸಂತ್ರಸ್ತರ ಕುಟುಂಬಸ್ಥರೂ ಕೂಡ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ಇದೊಂದು ವೈಜ್ಞಾನಿಕ ಕ್ರಮವಾಗಿದೆ. ಮೃತದೇಹಗಳ ಕುರಿತಂತೆ ಉಂಟಾಗುವ ಗೊಂದಲಗಳನ್ನು ನಿವಾರಣೆ ಮಾಡಲು ಹಾಗೂ ಶವಗಳನ್ನು ಗುರ್ತಿಸಲು ಈ ರೀತಿ ಮಾಡಲಾಗಿದೆ. ನಮ್ಮ ನಿರ್ಧಾರ ಜನರ ಮನಸ್ಸಿಗೆ ನೋವುಂಟು ಮಾಡಬೇಕೆಂಬುದಾಗಿಲ್ಲ ಎಂದು ಹೇಳಿಕೊಂಡಿದೆ.
ದಾಳಿ ನಡೆಸಿದ್ದ ಐವರಲ್ಲಿ ಇಬ್ಬರನ್ನು ಇದೀಗ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.