ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್
ಮುಂಬೈ: ರೈಲ್ವೆ ಇಲಾಖೆಯಲ್ಲಿನ ಸಮಸ್ಯೆಗಳು ಹೊಸದಲ್ಲ, ಹಿಂದಿನ ಯುಪಿಎ ಸರ್ಕಾರ ಅದನ್ನು 2014ರಲ್ಲಿ ಎನ್ ಡಿಎ ಮೈತ್ರಿ ಸರ್ಕಾರಕ್ಕೆ ಬಲಿಯಾಗಿ ಕೊಟ್ಟಿತು ಎಂದು ಕೇಂದ್ರ ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಟೀಕಿಸಿದ್ದಾರೆ.
ಮುಂಬೈಯ ಎಲ್ಫಿನ್'ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಮೊನ್ನೆ ಕಾಲ್ತುಳಿತಕ್ಕೆ 23 ಮಂದಿ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಘಟನೆಗೆ ಕ್ಷಮೆ ನೀಡುವುದಿಲ್ಲ. ಆದರೆ ಭಾರತೀಯ ರೈಲ್ವೆ ಇಲಾಖೆಯಲ್ಲಿನ ಸಮಸ್ಯೆಗಳು ಒಂದೆರಡು ವರ್ಷಗಳ ಹಳೆಯದ್ದಲ್ಲ. ಹಲವು ವರ್ಷಗಳ ಹಿಂದಿನಿಂದಲೇ ಇದ್ದು, 2014ರಲ್ಲಿ ಬಳುವಳಿಯಾಗಿ ನಮ್ಮ ಸರ್ಕಾರಕ್ಕೆ ನೀಡಲಾಯಿತು ಎಂದು ಆರೋಪಿಸಿದರು.
ನಿರ್ದಿಷ್ಟ ವ್ಯಕ್ತಿಯ ಹೆಸರು ಹೇಳದ ಸಚಿವರು, ಬುಲೆಟ್ ರೈಲನ್ನು ವಿರೋಧಿಸುವವರು ಸರ್ಕಾರ ಉತ್ತಮ ಆಧುನಿಕ ತಂತ್ರಜ್ಞಾನವನ್ನು ಜಾರಿಗೆ ತಂದು ಜನರ ಸುರಕ್ಷತೆಯನ್ನು ನೋಡಬೇಕೆ ಅಥವಾ ಬೇಡವೇ ಎಂಬುದಕ್ಕೆ ಉತ್ತರ ನೀಡಬೇಕೆಂದು ಹೇಳಿದರು. 100 ವರ್ಷಗಳ ಹಿಂದಿನ ತಂತ್ರಜ್ಞಾನದಲ್ಲಿ ಓಡುತ್ತಿರುವ ಭಾರತೀಯ ರೈಲ್ವೆಗೇ ಅವಲಂಬಿಸಿಕೊಂಡು ಆಧುನಿಕ ತಂತ್ರಜ್ಞಾನಗ್ಗೆ ಒಗ್ಗಿಕೊಳ್ಳದಿರುವುದು ಟೀಕಾಕಾರರ ಮನೋಧರ್ಮವಾಗಿದೆ ಎಂದು ಹೇಳಿದರು.
ಈ ವಿಷಯದಲ್ಲಿ ರಾಜಕೀಯ ಮಾಡುವ ಬದಲು ರಾಜಕೀಯ ಪಕ್ಷಗಳ ಮುಖಂಡರು ಉತ್ತಮ ಸಲಹೆಗಳನ್ನು ಸರ್ಕಾರಕ್ಕೆ ನೀಡಲಿ. ಆಗ ಜನರಿಗೆ ನಾವು ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ. ರಾಜಕೀಯವನ್ನು ಮೀರಿ ಬೆಳೆಯಲು ಇದೊಂದು ಉತ್ತಮ ಅವಕಾಶ ಎಂದರು.
ಮುಂಬೈ ರೈಲು ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತ ಘಟನೆ ನಂತರ ಕೇಂದ್ರ ಸರ್ಕಾರ 20 ಹೊಸ ಪಾದಚಾರಿ ಮೇಲ್ಸೇತುವೆಗಳನ್ನು ಕೇಂದ್ರ ರೈಲ್ವೆ ನಿಲ್ದಾಣಗಳಲ್ಲಿ ಮತ್ು 10 ಹೊಸ ಮೇಲ್ಸೇತುವೆಗಳನ್ನು ಪಶ್ಚಿಮ ರೈಲ್ವೆಗಳಲ್ಲಿ ನಿರ್ಮಾಣಕ್ಕೆ 13 ಪಾದಚಾರಿ ಮೇಲ್ಸೇತುವೆಗಳ ವಿಸ್ತರಣೆ, ಆಧುನಿಕ ತಂತ್ರಜ್ಞಾನದೊಂದಿಗೆ ದೇಶಾದ್ಯಂತ 40 ನಿರ್ವಹಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics