ಮಕ್ಕಳ ಮೇಲೆ ಎರಗಿರುವ ಪಿಟ್ ಬುಲ್ ನಾಯಿ
ನವದೆಹಲಿ: ಅಪಾಯಕಾರಿ ಪಿಟ್ ಬುಲ್ ನಾಯಿ ದಾಳಿಯಿಂದಾಗಿ ಮೂವರು ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಘಟನೆ ಸಿಸಿಟಿವಿ ದಾಖಲಾಗಿ ಈ ವಿಡಿಯೋ ಇದೀಗ ವೈರಲ್ ಆಗಿದೆ.
ದೆಹಲಿಯ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ವಿರುದ್ಧ ಆಕ್ರೋಶಗೊಂಡ ಪಿಟ್ ಬುಲ್ ನಾಯಿ ಏಕಾಏಕಿ ಮಕ್ಕಳ ಮೇಲೆ ಎರಗಿತು. ಕೂಡಲೇ ಅದನ್ನು ಕಂಡ ದಾರಿ ಹೋಕರು ನಾಯಿಯನ್ನು ಬಡಿದು ಅದರಿಂದ ಪುಟ್ಟ ಬಾಲಕನನ್ನು ರಕ್ಷಿಸಿದರು. ನಾಯಿ ಮೇಲೆ ಕುರ್ಚಿ ಎತ್ತಿ ಹಾಕಿ ಬಾಲಕನನ್ನು ರಕ್ಷಿಸಲಾಯಿತು. ಬಳಿಕ ಬಾಲಕನ ರಕ್ಷಣೆ ಮಾಡಿದ ಮಹಿಳೆ ಮತ್ತು ವ್ಯಕ್ತಿಯ ವಿರುದ್ಧವೇ ಎರಗಿದ ನಾಯಿ ಆವರನ್ನೂ ಅಟ್ಟಿಸಿಕೊಂಡು ಹೋಗಿದೆ.
ಇವಿಷ್ಟೂ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಾಹಿನಿಗಳಲ್ಲಿ ಈ ದೃಶ್ಯ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ದೆಹಲಿ ಪಾಲಿಕೆ ಇದೀಗ ಉತ್ತಮ್ ನಗರದಲ್ಲಿ ಬೀದಿನಾಯಿಗಳನ್ನು ನಿಯಂತ್ರಿಸುವುದಾಗಿ ಹೇಳಿಕೆ ನೀಡಿದೆ.
ವಿದೇಶಗಳಲ್ಲಿ ಭಾರಿ ಬೇಡಿಕೆ ಇರುವ ಈ ಪಿಟ್ ಬುಲ್ ನಾಯಿ ಬಲಿಷ್ಟ ಮತ್ತು ತೀರಾ ಅಪಾಯಕಾರಿ ನಾಯಿ ತಳಿ.. ಸಾಮಾನ್ಯವಾಗಿ ಸೇನೆಯಲ್ಲಿ ಈ ನಾಯಿಗಳನ್ನು ಬಳಕೆ ಮಾಡಲಾಗುತ್ತದೆ. ತನ್ನ ಗಾತ್ರ ಮತ್ತು ರೌದ್ರವತಾರದಿಂದಲೇ ಸುದ್ದಿಗೆ ಗ್ರಾಸವಾಗುವ ಈ ಪಿಟ್ ಬುಲ್ ನಾಯಿ ತನಗೆ ಆಕ್ರೋಶ ಬಂದರೆ ತನ್ನ ಮಾಲೀಕರ ಮೇಲೆಯೇ ದಾಳಿ ಮಾಡುವ ಗುಣಹೊಂದಿದೆ. ಈಗಾಗಲೇ ಪಿಟ್ ಬುಲ್ ನಾಯಿ ದಾಳಿಯಲ್ಲಿ ಮಾಲೀಕರು ಸಾವನ್ನಪ್ಪಿರುವ ಹಲವು ಪ್ರಕರಣಗಳನ್ನು ನಾವು ನೋಡಬಹುದು.