ನವದೆಹಲಿ: ಬಿಹಾರ ಕಾಂಗ್ರೆಸ್ ಪಕ್ಷದ ವ್ಯವಹಾರಗಳ ಉಸ್ತುವಾರಿಯಾಗಿ ಶಕ್ತಿಸಿನ್ಹ್ ಗೋಹಿಲ್ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆದೇಶಿಸಿದ್ದಾರೆ. ಇದುವರೆಗೆ ಬಿಹಾರ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಸಿಪಿ ಜೋಷಿ ಅವರ ಬದಲಿಗೆ ಗೋಹಿಲ್ ನೇಮಕವಾಗಿದೆ.
ಇದೇ ವೇಳೆ ಉತ್ತರಾಖಂಡದ ಪಕ್ಷದ ಉಸ್ತುವಾರಿಯಾಗಿ ಅನುಗ್ರಹ್ ನಾರಾಯಣ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಪ್ರಮುಖ ಅಸ್ಥಾನಗಳಲ್ಲಿ ಯುವ ನಾಯಕರನ್ನು ತರುವ ರಾಹುಲ್ ಗಾಂಧಿ ಅವರ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ. ರಾಹುಲ್ ಕಳೆದ ತಿಂಗಳು ನಡೆದ ಪಕ್ಷದ ಪ್ಲಾನರಿ ಸೆಷನ್ ನಲ್ಲಿ ಇದನ್ನು ಹೇಳಿದ್ದರು.
ಬಿಹಾರದ ಕಾಂಗ್ರೆಸ್ ಉಸ್ತುವಾರಿಯಾಗಿ ಸಿಪಿ ಜೋಷಿಯವರ ಕಾರ್ಯವನ್ನು ಪಕ್ಷ ಪ್ರಶಂಸಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಪಕ್ಷದ ಪ್ರಮುಖ ಸ್ಥಾನಗಳಿಗೆ ಹಲವು ಯುವ ನಾಯಕರನ್ನು ನೇಮಕ ಮಾಡಿದ್ದಾರೆ. ಮುಂಬರುವ ದಿನಗಳಲಿ ಪಕ್ಷದ ಸಂಪೂರ್ಣ ಪುನಶ್ಚೇತನಕ್ಕಾಗಿ ರಾಹುಲ್ ಸಾಕಷ್ಟು ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ.