ನವದೆಹಲಿ: ಆಧಾರ್ ಹೊಂದಿದವರ ಆಸ್ತಿ ಅಥವಾ ಹಣಕಾಸು ವಿವರಗಳು, ಬ್ಯಾಂಕ್ ಖಾತೆ ವಿವರ, ಆರೋಗ್ಯ ದಾಖಲಾತಿ ವಿವರಗಳಾವುದೂ ನಮ್ಮ ಬಳಿ ಇಲ್ಲ ಎಂದು ಯುಐಡಿಎಐ ಇಂದು ಸ್ಪಷ್ಟಪಡಿಸಿದೆ.
ಯುಐಡಿಎಐ ಡೇಟಾಬೇಸ್ ನಲ್ಲಿ ಅಂತಹ ವಿವರಗಳನ್ನು ಎಂದಿಗೂ ಹಾಕಲಾಗುವುದಿಲ್ಲ ಎಂದು ವಿಶಿಷ್ಟ ಗುರುತಿ ಚೀಟಿ ಪ್ರಾಧಿಕಾರ ಹೇಳಿದೆ.
ಪ್ರಾಧಿಕಾರವು ತನ್ನ ಡೇಟಾಬೇಸ್ ನಲ್ಲಿ ಆಧಾರ್ ಖಾತೆದಾರರ ಬಯೋಮೆಟ್ರಿಕ್ ವಿವರದೊಡನೆ ಅವರ ಕನಿಷ್ಠ ಮಾಹಿತಿ ಮಾತ್ರವೇ ಹೊಂದಿದೆ. ಇದಲ್ಲದೆ ಯುಐಡಿಎಐಗೆ ಬ್ಯಾಂಕ್ ಖಾತೆಗಳು, ಷೇರುಗಳು, ಮ್ಯೂಚುಯಲ್ ಫಂಡ್ ಗಳು, ಹಣಕಾಸು ಮತ್ತು ಆಸ್ತಿ ವಿವರಗಳು, ಆರೋಗ್ಯ ದಾಖಲೆಗಳು, ಕುಟುಂಬ, ಜಾತಿ, ಧರ್ಮ ಮತ್ತು ಶಿಕ್ಷಣ ಮುಂತಾದವುಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ಮಾಹಿತಿಯನ್ನು ಅದರ ಡೇಟಾಬೇಸ್ ನಲ್ಲಿ ಎಂದಿಗೂ ಹಾಕಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು FAQ ಗಳನ್ನು ಪ್ರಕಟಿಸಿರುವ ಯುಐಡಿಎಐ ಸುಮಾರು ಒಂದು ಡಜನ್ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಡೇಟಾ ಸುರಕ್ಷತೆ, ಪ್ರೊಫೈಲಿಂಗ್ ಮತ್ತು ಆಧಾರ್ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳ ಸಂಪರ್ಕದ ಬಗ್ಗೆ ಅಲ್ಲಿ ವಿವರವಾಗಿ ಉತ್ತರಿಸಲಾಗಿದೆ.
ಆಧಾರ್ ಕೇವಲ ಒಂದು ಐಡೆಂಟಿಫಿಕೇಷನ್ ಮಾತ್ರವೇ ಹೊರತು ಪ್ರೊಫೈಲಿಂಗ್ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್ ಬಳಕೆಯ ಸಂಬಂಧ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠದ ಎದುರಿಗೆ ಅನೇಕ ಅರ್ಜಿಗಳು ಬಂದಿದೆ. ನ್ಯಾಯಪೀಠವು ಈ ಅರ್ಜಿ ವಿಚಾರಣೆ ನಡೆಸುವ ಸಮಯದಲ್ಲೇ ಯುಐಡಿಎಐ ಈ ಪ್ರಶ್ನೋತ್ತರ ಸರಣಿಯನ್ನು ಬಿಡುಗಡೆ ಮಾಡಿದೆ.
ಯುಐಡಿಎಐ ದತ್ತಾಂಶವನ್ನು ರಕ್ಷಿಸುವುದಕ್ಕಾಗಿ ಸುಧಾರಿತ ಭದ್ರತಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. ಆಧುನಿಕ ಭದ್ರತಾ ಸವಾಲನ್ನು ಎದುರಿಸಲಿಕ್ಕಾಗಿ ಅವುಗಳನ್ನು ಅಪ್ಗ್ರೇಡ್ ಮಾಡುತ್ತದೆ. ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.