ದೇಶ

ಸರ್ಕಾರಿ ಅಧಿಕಾರಿಗಳ ಮನೆಬಳಕೆ ದೂರವಾಣಿಗಳಿಗೆ ಐಎಸ್ ಡಿ ಮರುಪಾವತಿ ಇಲ್ಲ: ಹಣಕಾಸು ಸಚಿವಾಲಯ

Raghavendra Adiga
ನವದೆಹಲಿ: ಯಾವುದೇ ಸರ್ಕಾರಿ ಅಧಿಕಾರಿಗಳ ಮನೆಬಳಕೆ ದೂರವಾಣಿಯಲ್ಲಿ ಐಎಸ್ ಡಿ ಕರೆಗಳ ಶುಲ್ಕ ಮರುಪಾವತಿ ಸೌಲಭ್ಯವಿರುವುದಿಲ್ಲ.  ಕೇವಲ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು  ಮಾತ್ರವೇ ತಮ್ಮ ಕಛೇರಿಯ ಲ್ಯಾಂಡ್ ಫೋನ್ ಗಳಲ್ಲಿ ಇಂತಹಾ ಸೌಕರ್ಯ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವಾಲಯದ ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹಣಕಾಸು ಸಚಿವಾಲಯವು ದೂರವಾಣಿ ಸೌಲಭ್ಯಗಳು ಮತ್ತು ಮರುಪಾವತಿಗಾಗಿ ಸಮಗ್ರ ಮಾರ್ಗಸೂಚಿಗಳನ್ನು ನೀಡಿದ್ದು ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಒಮ್ಮೆ ಮಾತ್ರವೇ 25,000 ರೂಪಾಯಿಗಳಿಗಿಂತ ಹೆಚ್ಚಲ್ಲದ ಒಂದು ಮೊಬೈಲ್ ಹ್ಯಾಂಡ್ ಸೆಟ್ ನ ಬಿಲ್ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದಿದೆ. 
ಮನೆಯಲ್ಲಿ ಬಳಸುವ ದೂರವಾಣಿಗಳಲ್ಲಿ ಐಎಸ್ ಡಿ ಶುಲ್ಕ ಮರುಪಾವತಿ ಇಲ್ಲ ಎಂದು ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ. ಮನೆಯ ದೂರವಾಣಿ, ಮೊಬೈಲ್ ಮತ್ತು  ಬ್ರಾಡ್ ಬ್ಯಾಂಡ್ ಗಾಗಿ ಓರ್ವ ಕಾರ್ಯದರ್ಶಿ ಮಟ್ಟದ ಅಧಿಕಾರಿಗೆ ಮಾಸಿಕ ರೂ 4,200, ಹೆಚ್ಚುವರಿ ಕಾರ್ಯದರ್ಶಿಗೆ ರೂ 3,000, ಜಂಟಿ ಕಾರ್ಯದರ್ಶಿಗೆ ರೂ 2,700, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿಗೆ 2,250 ರೂ. ಉಪ ಕಾರ್ಯದರ್ಶಿ ಹುದ್ದೆಗೆ 1,200 ರೂ. ಮರುಪಾವತಿ ಮಾಡಲು ಸೂಚಿಸಲಾಗಿದೆ.
ಆಡಳಿತಾತ್ಮಕ ಕಾರ್ಯದರ್ಶಿಗಳ ಅಧಿಕೃತ ಟೆಲಿಫೋನ್ ಗಳಲ್ಲಿ ಮಾತ್ರವೇ ಐಎಸ್ ಡಿ ಶುಲ್ಕ ಮರುಪಾವತಿಗೆ ಅನುಮತಿ ಇದೆ. 
ಇತರೆ ಅಧಿಕಾರಿಗಳ ಕಛೇರಿ ದೂರವಾಣಿಗಳಿಗೆ ಈ ಸೌಲಭ್ಯ ಕಲ್ಪಿಸುವುದಕ್ಕೆ ಆಡಳಿತಾತ್ಮಕ ಕಾರ್ಯದರ್ಶಿಯು ಸಂಬಂಧಿಸಿದ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಚಿವಾಲಯ ಮೂಲಗಳು ಹೇಳಿದೆ.
SCROLL FOR NEXT