ನವದೆಹಲಿ: 23 ದಿನಗಳ ಸಂಸತ್ ಕಲಾಪ ಯಾವುದೇ ರೀತಿಯ ಚರ್ಚೆ, ಮಸೂದೆ ಮಂಡನೆ ಇಲ್ಲದೇ ವ್ಯರ್ಥವಾದ ಹಿನ್ನಲೆಯಲ್ಲಿ ಆಡಳಿತಾ ರೂಢ ಬಿಜೆಪಿಯೂ ಸೇರಿದಂತೆ ಎನ್ ಡಿಎ ಮೈತ್ರಿಕೂಟದ ಎಲ್ಲ ಸಂಸದರೂ ಸಂಸತ್ ಕಲಾಪದ ವೇತನ ಪಡೆಯದರಲು ನಿರ್ಧರಿಸಿದ್ದಾರೆ.
ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ಇತರ ಮಿತ್ರಪಕ್ಷಗಳ ಸಂಸದರು ಬಜೆಟ್ ಅಧಿವೇಶನ ನಡೆದ 23 ದಿನಗಳ ವೇತನವನ್ನು ಪಡೆಯದಿರಲು ನಿರ್ಧರಿಸಿದ್ದಾರೆ. ಈ 23 ದಿನಗಳಲ್ಲಿ ಸಂಸತ್‌ನಲ್ಲಿ ಕಲಾಪಗಳು ನಡೆಯದೇ ಇರುವುದರಿಂದ ಸಂಸದರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈ ವೇತನವನ್ನು ನಮಗೆ ದೇಶದ ಜನರ ಸೇವೆ ಮಾಡಲು ನೀಡಲಾಗುತ್ತದೆ. ಅದನ್ನು ನಮಗೆ ಮಾಡಲು ಸಾಧ್ಯವಾಗದಿದ್ದರೆ ಜನರ ಹಣವನ್ನು ಪಡೆಯುವ ಅಧಿಕಾರ ನಮಗಿರುವುದಿಲ್ಲ. 23 ದಿನಗಳಲ್ಲಿ ಸಂಸತ್‌ನಲ್ಲಿ ಕಲಾಪವು ಸರಿಯಾಗಿ ನಡೆಯಲಿಲ್ಲ ಹಾಗಾಗಿ ಆ 23 ದಿನಗಳ ವೇತನವನ್ನು ಪಡೆಯದಿರಲು ಎನ್ ಡಿಎಯ ಸಂಸದರು ತೀರ್ಮಾನಿಸಿರುವುದಾಗಿ ಅನಂತ ಕುಮಾರ್ ತಿಳಿಸಿದ್ದಾರೆ.
ಇನ್ನು ಹಾಲಿ ಸಂಸತ್ ಕಲಾಪ ವಿವಿಧ ಕಾರಣಗಳಿಂದಾಗಿ ಗೊಂದಲದ ಗೂಡಾಗಿತ್ತು. ಅತ್ತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ತೆಲುಗು ದೇಶಂ ಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೇಂದ್ರದ ಮೋದಿ ಸರ್ಕಾರದ ವಿರುದ್ದ ವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಿತ್ತು. ಈ ವಿಚಾರ ಕೂಡ ಸುಗಮ ಕಲಾಪವನ್ನು ನುಂಗಿ ಹಾಕಿತ್ತು. ಏತನ್ಮಧ್ಯೆ ಇತ್ತ ತಮಿಳುನಾಡು ಸಂಸದರು ಕಾವೇರಿ ನಿರ್ವಹಣಾ ಮಂಡಳಿಯನ್ನು ಕೂಡಲೇ ರಚನೆ ಮಾಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮತ್ತೆ ಕಲಾಪಕ್ಕೆ ಅಡ್ಡಿಯಾಯಿತು.
ಈ ವಿಚಾರಗಳ ಮಧ್ಯೆಯೇ ಈಶಾನ್ಯ ಭಾರತ ಚುನಾವಣೆ ಬಳಿಕ ನಡೆದ ಪ್ರತಿಮೆಗಳ ಧ್ವಂಸ ಪ್ರಕರಣವೂ ಮತ್ತು ಎಸ್ ಸಿ/ ಎಸ್ ಟಿ ಕಾಯ್ದೆ ವಿವಾದವೂ ಸಂಸತ್ ಕಲಾಪಕ್ಕೆ ಅಡ್ಡಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics