ದೇಶ

ಸಲ್ಮಾನ್ ಖಾನ್ ಗೆ ಶಿಕ್ಷೆ ನೀಡಿದ ಜಡ್ಜ್ ಸೇರಿದಂತೆ 87 ನ್ಯಾಯಾಧೀಶರ ವರ್ಗಾವಣೆ!

Srinivasamurthy VN
ಜೋಧ್ ಪುರ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದ  ಜೋಧ್ ಪುರ ಸೆಷನ್ಸ್ ಕೋರ್ಚ್  ನ್ಯಾಯಮೂರ್ತಿಗಳೂ ಸೇರಿದಂತೆ ಆ ರಾಜ್ಯದ ಒಟ್ಟು 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ರಾಜಸ್ತಾನ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, 20 ವರ್ಷಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದ  ಜೋಧ್ ಪುರ ಸೆಷನ್ಸ್ ಕೋರ್ಚ್  ನ್ಯಾಯಮೂರ್ತಿ ದೇವ್ ರೂಪ್ ಖತ್ರಿ ಸೇರಿದಂತೆ ಒಟ್ಟು 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ರಾಜಸ್ತಾನದ ಹೈಕೋರ್ಟ್ ಆದೇಶದಂತೆ ಅಧಿಕಾರಿಗಳು ಒಟ್ಟು 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದ್ದಾರೆ. 
ಹೀಗಾಗಿ ನಟ ಸಲ್ಮಾನ್ ಖಾನ್ ಪ್ರಕರಣವನ್ನು ಇನ್ನು ಮುಂದೆ ಜೋಧ್ ಪುರ ಸೆಷನ್ಸ್ ಕೋರ್ಟ್ ನ ನ್ಯಾಯಮೂರ್ತಿಯಾಗಿ ವರ್ಗವಾಗಿರುವ ರವೀಂದ್ರ ಕುಮಾರ್ ಅವರು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 
ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ ಇಂದು ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿಯ ಆದೇಶವಿದೆ. ಹೀಗಾಗಿ ಇಂದೇ ರವೀಂದ್ರ ಕುಮಾರ್ ಅವರ ಅಧಿಕಾರ ಸ್ವೀಕರಿಸಿ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೇವ್ ರೂಪ್ ಖತ್ರಿ ಅವರು ಆದೇಶವನ್ನು ಶನಿವಾರಕ್ಕೆ ಮುಂದೂಡಿದ್ದರು.
SCROLL FOR NEXT