ದೇಶ

15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳು ಪ್ರಗತಿಪರ ರಾಜ್ಯಗಳ ವಿರುದ್ಧವಾಗಿವೆ: ದಕ್ಷಿಣ ರಾಜ್ಯಗಳ ಸಚಿವರು

Lingaraj Badiger
ತಿರುವನಂತಪುರಂ: ಕೇಂದ್ರ ಸರ್ಕಾರ ರಚಿಸಿರುವ 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳು ಪ್ರಗತಿಪರ ರಾಜ್ಯಗಳ ವಿರುದ್ಧವಾಗಿವೆ ಎಂದು ದಕ್ಷಿಣ ಭಾರತದ ಮೂರು ಬಿಜೆಪಿಯೇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಆರೋಪಿಸಿವೆ.
ತಿರುನವನಂತಪುರಂನಲ್ಲಿ ನಡೆದ ದಕ್ಷಿಣ ಭಾರತ(ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಪುದುಚೇರಿ)ದ ಹಣಕಾಸು ಸಚಿವರ ಸಮ್ಮೇಳನದಲ್ಲಿ, ಉಲ್ಲೇಖಿತ ನಿಯಮಗಳು, ಸಂವಿಧಾನದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿವೆ ಮತ್ತು ರಾಜ್ಯಗಳು ಆದಾಯ ನಷ್ಟಕ್ಕೆ ಕಾರಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳು ಮತ್ತು ಕೇಂದ್ರ ಸರ್ಕಾರದ ಇತರೆ ನೀತಿಗಳನ್ನು ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಿನಿಂದ ವಿರೋಧಿಸಿದ್ದ, ರಾಜ್ಯಗಳ ಆದಾಯ ಹಂಚಿಕೆಗೆ ಸಂಬಂಧಿಸಿದಂತೆ ಈ ಹಿಂದಿನ ಹಣಕಾಸು ಆಯೋಗ ಬಳಸಿದ್ದ 1971ರ ಜನಗಣತಿ ಬದಲು 2011ರ ಜನಗಣತಿ ಆಧಾರದ ಮೇಲೆ ಆದಾಯ ಹಂಚಿಕೆ ಮಾಡುವ ಶಿಫಾರಸಿಗೂ ವಿರೋಧ ವ್ಯಕ್ತಪಡಿಸಿವೆ. ಇದರೊಂದಿಗೆ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಹಣಕಾಸು ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಇನ್ನಷ್ಟುಬಲ ಪಡೆದುಕೊಂಡಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಕೇದ್ರದ ಅನುದಾನ ಹಂಚಿಕೆಗೆ 2011ರ ಜನಗಣತಿಯನ್ನು ಆಧಾರವಾಗಿ ಬಳಸಬೇಕು ಎಂದು ತಿಳಿಸಲಾಗಿದೆ. ಇದು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. 1971ರಿಂದ ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿವೆ. ಹೀಗಾಗಿ ಈ ರಾಜ್ಯಗಳ ಜನಸಂಖ್ಯೆಯ ಏರಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದು ವೇಳೆ 2011ರ ಜನಗಣತಿಯನ್ನು ಅನುದಾನ ಹಂಚಿಕೆಗೆ ಮಾನದಂಡವಾಗಿ ಪರಿಗಣಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯುವ ಆದಾಯದಲ್ಲಿ ಕೊರತೆ ಉಂಟಾಗಲಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಿಂದ ರಾಜ್ಯ ಸರ್ಕಾರಗಳು ಸಾಲ ಪಡೆಯುವ ಸಾಮರ್ಥ್ಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಕೂಡ ದಕ್ಷಿಣದ ರಾಜ್ಯಗಳ ಚಿಂತೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, 15ನೇ ಹಣಕಾಸು ಆಯೋಗ ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಚರ್ಚೆನಡೆಸಲು ಕೇರಳ ಕರೆದಿದ್ದ ದಕ್ಷಿಣ ಭಾರತ ಹಣಕಾಸು ಸಚಿವ ಸಭೆಗೆ ತಮಿಳುನಾಡು, ತೆಲಂಗಾಣ ಸಚಿವರು ಗೈರು ಆಗಿದ್ದಾರೆ.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಫೇಸ್ ಬುಕ್ ನಲ್ಲಿ ಲೇಖನ ಪ್ರಕಟಿಸಿದ್ದರು. 
SCROLL FOR NEXT