ನವದೆಹಲಿ: ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(ಐಆರ್ ಸಿಟಿಸಿ) ಹೊಟೇಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ಮಂಗಳವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಸಿಬಿಐ ಅಧಿಕಾರಿಗಳ ತಂಡ ರಾಬ್ರಿ ದೇವಿ ಅವರನ್ನು ಪಾಟ್ನಾದಲ್ಲಿಯೇ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2006ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಹೊಟೇಲ್ ಗಳಿಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಸಿಬಿಐ ಲಾಲು ಪತ್ನಿ ರಾಬ್ರಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ಈ ಸಂಬಂಧ ಕಳೆದ ಜೂನ್ ನಲ್ಲಿ ಸಿಬಿಐ, ದೆಹಲಿ, ಪಾಟ್ನಾದಲ್ಲಿರುವ ಲಾಲು ನಿವಾಸ ಹಾಗೂ ಗುರುಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿತ್ತು. ಅಲ್ಲದೆ ಸಿಬಿಐ ಕೋರ್ಟ್ ಮುಂದೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿತ್ತು.
ಪುರಿ ಮತ್ತು ರಾಂಚಿಯಲ್ಲಿ ರೈಲ್ವೆಗಾಗಿ ಎರಡು ಹೋಟೆಲ್ ಗಳನ್ನು ನಡೆಸಲು ಹರ್ಷ್ ಕೊಚ್ಚರ್ ಎಂಬುವರಿಗೆ 15 ವರ್ಷಗಳ ಗುತ್ತಿಗೆ ನೀಡಿದ್ದು ಅದಕ್ಕೆ ಪ್ರತಿಯಾಗಿ ಲಾಲು ಪ್ರಸಾದ್ ಯಾದವ್ ಕುಟುಂಬ ಪಾಟ್ನಾದಲ್ಲಿ ಎರಡು ಎಕರೆ ಜಮೀನನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.