ದೇಶ

ವಿಮಾನದಲ್ಲಿ ಸೊಳ್ಳೆಗಳ ಬಗ್ಗೆ ದೂರು: ಪ್ರಯಾಣಿಕನನ್ನು ಹೊರಹಾಕಿದ ಇಂಡಿಗೋ ಏರ್ ಲೈನ್ಸ್

Shilpa D
ನವದೆಹಲಿ: ವಿಮಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಶಿಸ್ತಿನ ನಡವಳಿಕೆ ತೋರಿದ ಪ್ರಯಾಣಿಕನನ್ನು ಇಂಡಿಗೋ ಏರ್ ಲೈನ್ಸ್ ಹೊರಹಾಕಿದೆ.
ಲಕ್ನೋದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕ ಸೌರಭ್‌ ರಾಯ್‌ ಎಂಬ ಪ್ರಯಾಣಿಕನನ್ನು ಸಿಬಂದಿಗಳು ವಿಮಾನದಿಂದ ಹೊರಹಾಕಿದ್ದಾರೆ. 
ಇಂಡಿಗೋ ಏರ್‌ ಲೈನ್ಸ್‌  ಸಂಸ್ಥೆ ಈ ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದ್ದು ಸೌರಭ್‌ ರಾಯ್‌ ಎಂಬ ಪ್ರಯಾಣಿಕ ತೋರಿದ ದುರ್ವರ್ತನೆಗಾಗಿ ಆತನನ್ನು ವಿಮಾನದಿಂದ ಹೊರಹಾಕಬೇಕಾಯಿತು ಎಂದು ತಿಳಿಸಿದೆ. 
ಇಂಡಿಗೋ ಏರ್‌ ಲೈನ್ಸ್‌ ಪ್ರಕಾರ ಆರೋಪಿ  ಪ್ರಯಾಣಿಕ ಸೌರಭ್‌ ರಾಯ್‌ ವಿಮಾನದೊಳಗೆ ಸೊಳ್ಳೆ ಗಳಿವೆ  ಎಂದು ಕೂಗಾಡಿದ್ದ.  ಆತನ ದೂರಿನ ಪ್ರಕಾರ ಸಮಸ್ಯೆಯನ್ನು ನಿವಾರಿಸಲು ಕ್ಯಾಬಿನ್‌ ಸಿಬಂದಿಗಳು ಮುಂದಾದಾಗ ಆತ ವ್ಯಗ್ರನಾಗಿ ಬೆದರಿಕೆಯ ಭಾಷೆಯನ್ನು ಬಳಸಿದ ಎಂದು ತಿಳಿದು ಬಂದಿದೆ.
ವಿಮಾನವು ಹಾರಾಟಕ್ಕೆ ಅಣಿಯಾಗಿ ಬಾಗಿಲುಗಳನ್ನು ಮುಚ್ಚಿದಾಗ ಆರೋಪಿ ಪ್ರಯಾಣಿಕ ಸೌರಭ್‌ ರಾಯ್‌, ಇತರ ಪ್ರಯಾಣಿಕರನ್ನೂ ತನ್ನ ಕೆಟ್ಟ ಭಾಷೆಯಿಂದ ಪ್ರಚೋದಿಸಿ ವಿಮಾನಕ್ಕೆ ಹಾನಿ ಉಂಟುಮಾಡುವಂತೆ ಕರೆಕೊಟ್ಟ; ಮಾತ್ರವಲ್ಲದೆ ಹೈಜಾಕ್‌ ಮುಂತಾದ ಬೆದರಿಕೆಯ ಪದಗಳನ್ನು ಕೂಡ ಬಳಸಿದ.
ವಿಮಾನ ಹಾಗೂ ಪ್ರಯಾಣಿಕರ ಸುರಕ್ಷೆಯ ಶಿಷ್ಟಾಚಾರಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪೈಲಟ್‌ ಇನ್‌ ಕಮಾಂಡ್‌ ಆರೋಪಿ ಪ್ರಯಾಣಿಕನನ್ನು ವಿಮಾನದಿಂದ ಹೊರ ಹಾಕಲು ನಿರ್ಧರಿಸಿದರು ಎಂದು ಇಂಡಿಗೋ ಪ್ರಕಟಣೆ ತಿಳಿಸಿದೆ. 
ಆದರೆ ಈ ಸಂಬಂಧ ಹೇಳಿಕೆ ನೀಡಿರುವ ಸೌರಭ್ ರಾಯ್, ಇಂಡಿಗೋ ವಿಮಾನದಲ್ಲಿ ತುಂಬಾ ಸೊಳ್ಳೆಗಳಿದ್ದವು, ಇದನ್ನು ನಾನು ಪ್ರಶ್ನಿಸಿದ್ದಕ್ಕೆ ನನ್ನನ್ನು ವಿಮಾನದಿಂದ ಕೆಳಗಿಳಿಸಲಾಯಿತು, ಜೊತೆಗೆ ನನಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ಹೇಳಿದ್ದಾರೆ.
ಎನ್ ಜಿಟಿ ಆದೇಶದ ಪ್ರಕಾರ ವಿಮಾನದಲ್ಲಿ ಪ್ರಯಾಣಿಕರಿರುವಾಗ ಸೋಂಕು ನಿವಾರಕಗಳನ್ನು ಬಳಸುವಂತಿಲ್ಲ ಎಂದು ಇಂಡಿಗೋ ಎರ್ ಲೈನ್ಸ್ ಸ್ಪಷ್ಟನೆ ನೀಡಿದೆ.
SCROLL FOR NEXT