ದೇಶ

15ನೇ ಹಣಕಾಸು ಆಯೋಗದ ಟಿಒಆರ್ ನಲ್ಲಿ ದಕ್ಷಿಣ-ಉತ್ತರ ರಾಜ್ಯಗಳ ನಡುವೆ ತಾರತಮ್ಯ ಇಲ್ಲ: ಮೋದಿ

Srinivas Rao BV
ಚೆನ್ನೈ: 15 ನೇ ಹಣಕಾಸು ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್(ಟಿಒಆರ್) ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದು, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದ್ದಾರೆ. 
ಚೆನ್ನೈ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ 15 ನೇ ಹಣಕಾಸು ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್  ಪಕ್ಷಪಾತದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅದು ಆಧಾರ ರಹಿತ" ಎಂದು ಹೇಳಿದ್ದು, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡ ರಾಜ್ಯಗಳನ್ನು ಉತ್ತೇಜಿಸುವಂತೆ ಕೇಂದ್ರ ಸರ್ಕಾರ ಹಣಕಾಸು ಆಯೋಗಕ್ಕೆ ಸಲಹೆ ನೀಡಿತ್ತು. ಈ ಮಾನದಂಡದ ಆಧಾರದಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ಪ್ರಯೋಜನವಾಗಲಿದೆ, ಆದರೆ ಈ ವಿಷಯದ ಬಗ್ಗೆ ಆರೋಪ ಮಾಡುತ್ತಿರುವವರು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.   
ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಉತ್ತಮ ಆರ್ಥಿಕ ಬೆಳವಣಿಗೆ ಸಾಧಿಸಿದರೂ, ಹಣಕಾಸು ಆಯೋಗದ ಟಿಒಆರ್ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಸಂಪನ್ಮೂಲಗಳ ಹಂಚಿಕೆಯಾಗುತ್ತಿತ್ತು ಎಂಬ ಕೂಗು ಕೇಳಿಬರುತ್ತಿತ್ತು ಎಂದು ಮೋದಿ ಹೇಳಿದ್ದಾರೆ. 
ಟರ್ಮ್ಸ್ ಆಫ್ ರೆಫರೆನ್ಸ್(ಟಿಒಆರ್) ಕುರಿತು ಮೊದಲು ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು, ನಂತರ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸೇರಿದಂತೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಸ್ಪಷ್ಟನೆ ನೀಡುವುದಕ್ಕೂ ಮುನ್ನ ಕೇರಳ ಹಣಕಾಸು ಸಚಿವ ಥಾಮಸ್ ಐಸ್ಯಾಕ್ ನಡೆಸಿದ್ದ ದಕ್ಷಿಣ ಭಾರತದ ಹಣಕಾಸು ಸಚಿವರ ಸಭೆಯಲ್ಲಿ ಟಿಒಆರ್ ನ್ನು ಒಕ್ಕೂಟಕ್ಕೆ ಮಾರಕ ಎಂಬ ನಿಲುವನ್ನು ಪ್ರಕಟಿಸಲಾಗಿತ್ತು. 
ಈ ಬಗ್ಗೆ ಮೋದಿ ಸ್ಪಷ್ಟನೆ ನೀಡಿದ್ದು, "ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಲ್ಲಿ ನಂಬಿಕೆ ಇಟ್ಟಿದ್ದೇವೆ, ನವ ಭಾರತ ನಿರ್ಮಾಣಕ್ಕಾಗಿ ನಾವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ, ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT