ದೇಶ

ಒಡಿಶಾ: ಮಾಟ, ಮಂತ್ರದ ಹೆಸರಿನಲ್ಲಿ ತ್ರಿವಳಿ ಹತ್ಯೆ, 9 ಮಂದಿಗೆ ಗಲ್ಲು ಶಿಕ್ಷೆ

Lingaraj Badiger
ರಾಯಗಢ: ಮಾಟ, ಮಂತ್ರದ ಹೆಸರಿನಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಕೋರ್ಟ್ 9 ಅಪರಾಧಿಗಳಿಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
18 ತಿಂಗಳ ಹಿಂದೆ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಗುನುಪುರ್ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಭೆಂದು ಕುಮಾರ್ ಪಟಿ ಅವರು, ಇದೊಂದು ಅತ್ಯಂತ ಅಪರೂಪ ಪ್ರಕರಣ ಎಂದು ಪರಿಗಣಿಸಿ 9 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಮಾಟ, ಮಂತ್ರ ಮಾಡಿಸುತ್ತಿದ್ದ 9 ಮಂದಿ, ಸೆಪ್ಟೆಂಬರ್ 9, 2016ರಂದು ಅಸಿನ್ ಸಬರಾ ಆತನ ಪತ್ನಿ ಅಂಬಾಯಿ ಸಬರಾ ಮತ್ತು ಹಿರಿಯ ಪುತ್ರಿ ಆಸಿಮಾನಿ ಸಬರಾಳನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದು ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ನಂತರ ಅವರ ಖಾಸಗಿ ಭಾಗಕ್ಕೆ ಮತ್ತು ಕಣ್ಣಿನಂತಹ ಸೂಕ್ಷ ಜಾಗಕ್ಕೆ ಕೀಟನಾಶಕ ಇಂಜೆಕ್ಷನ್ ಮಾಡಿ, ಬಳಿಕ ಜೀವಂತವಾಗಿ ಸುಟ್ಟು ಹಾಕಿದ್ದರು.
ಅಸಿನ್ ಸಬರಾ ಅವರ ಮತ್ತೊಬ್ಬ ಪತ್ರಿ ಮಿಲಿತಾ ಸಬರಾ ಎದುರೇ ದುಷ್ಕರ್ಮಿಗಳು ಈ ಅಮಾನವೀಯ ಕೃತ್ಯ ಎಸಗಿದ್ದು, ವಿಷಯ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಕೃಷ್ಣಚಂದ್ರ ಸೇನಾಪತಿ ಅವರು ಹೇಳಿದ್ದಾರೆ.
SCROLL FOR NEXT