ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್
ಲಖನೌ(ಉತ್ತರ ಪ್ರದೇಶ): ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಲಖನೌನ ನವಾಲ್ ಕಿಶೋರ್ ರಸ್ತೆಯಲ್ಲಿರುವ ಸಿಬಿಐ ಕಛೇರಿಯಲ್ಲಿ ಕೇಂದ್ರೀಯ ತನಿಖಾ ತಂಡವು 16 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ ನಂತರ ಸೆಂಗರ್ ಅವರನ್ನು ಬಂಧಿಸಲಾಯಿತು. ಇಂದು ಸುಮಾರು 5 ಗಂಟೆಗೆ ಅವರನ್ನು ಕಛೇರಿಗೆ ಕರೆತರಲಾಗಿತ್ತು ಎಂದು ದೆಹಲಿಯಲ್ಲಿ ಅಧಿಕಾರಿಗಳು ಹೇಳಿದ್ದಾರೆ.
ಅತ್ಯಾಚಾರ ಆರೋಪಿ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಅಲಹಬಾದ್ ಹೈಕೋರ್ಟ್ ಶುಕ್ರವಾರ ಬೆಳಿಗ್ಗೆ ಸಿಬಿಐಗೆ ಆದೇಶಿಸಿತ್ತು.
ಈ ಸಂಬಂಧ ವಿರೋಧಪಕ್ಷಗಳು ಬಿಜೆಪಿಯು ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದವು. ಇದೇ ವೇಳೆ ಪ್ರಧಾನಿ ಮೋದ್ ಮಾತನಾಡಿ ಯಾವುದೇ ಅಪರಾಧಿಗಳನ್ನು ರಕ್ಷಿಸಲಾಗುವುದಿಲ್ಲ. ರಾಷ್ಟ್ರದ ಹೆಣ್ಣು ಮಕ್ಕಳಿಗೆ ನ್ಯಾಯ ನೀಡಲಾಗುವುದು ಎಂದು ಪ್ರತಿಪಾದಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಸಕನ ಮೇಲೆ ಕ್ರಮ ಜರುಗಿಸುವಲ್ಲಿ ವಿಳಂಬವಾದ ಕಾರಣ ಉತ್ತರ ಪ್ರದೇಶ ಸರ್ಕಾರದ ಮೇಲೆ ಭಾರೀ ಆರೋಪಗಳು ಕೇಳಿಬಂದಿದ್ದವು. ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ "ನಮ್ಮ ಸರ್ಕಾರ ಯಾವ ಅಪರಾಧಿಅಗ್ಳಿಗೂ ರಕ್ಷಣೆ ನೀಡುವುದಿಲ್ಲ. ಅವರೆಷ್ಟೇ ಪ್ರಭಾವಶಾಲಿಗಳಾಗಿರಲಿ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.