ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ
ನವದೆಹಲಿ; ಕಾಶ್ಮೀರದ ಕಠುವಾ ಹಾಗೂ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣಗಳ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ಮುರಿದು ಪ್ರತಿಕ್ರಿಯೆ ನೀಡಿರುವ ಹಿನ್ನಲೆಯಲ್ಲಿ ಧನ್ಯವಾದಗಳನ್ನು ಸಲ್ಲಿಸಿರುವ ಕಾಂಗ್ರೆಸ್ ಭರವಸೆಯ ಬದಲಿಗೆ ಅತ್ಯಾಚಾರ ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಶನಿವಾರ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು, ಬಿಜೆಪಿ ದಲಿತ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದು, ಕೇವಲ ಸ್ಮಾರಕವನ್ನು ಉದ್ಘಾಟಿಸಿದ ಮಾತ್ರಕ್ಕೆ ಅವರ ಮನಸ್ಥಿತಿ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈಗಲಾದರೂ ಪ್ರಧಾನಮಂತ್ರಿಗಳು ಮೌನ ಮುರಿದು ಮಾತನಾಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತೇವೆ. ತಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತರಲಿ ಎಂದು ನಾವು ಆಶಿಸುತ್ತೇವೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆಂದು ತಿಳಿಸಿದ್ದಾರೆ.
ಕಾರ್ಯಗಳು ಲೆಕ್ಕಕ್ಕೆ ಬರುತ್ತವೆ. ಮಾತುಗಳಲ್ಲ. ಆರ್'ಎಸ್ಎಸ್, ಬಿಜೆಪಿ, ಪ್ರಧಾನಮಂತ್ರಿ ಮತ್ತು ಸರ್ಕಾರದ ದಲಿತ ವಿರೋಧಿ ಮನಸ್ಥಿತಿಯನ್ನು ಹೊಂದಿದೆ. ಅವರ ಆಲೋಚನೆ, ಕಾರ್ಯಗಳು, ಆಲೋಚನಾ ಪ್ರಕ್ರಿಯೆಗಳು, ಕ್ರಮ, ನೀತಿಗಳೆಲ್ಲವೂ ದಲಿತ ವಿರೋಧಿಗಳೇ ಆಗಿವೆ ಎಂದಿದ್ದಾರೆ.