ಸೂರತ್: ಉತ್ತರ ಪ್ರದೇಶದ ಉನ್ನಾವೊ ಹಾಗೂ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ಬೆನ್ನಲ್ಲೇ ಗುಜರಾತ್ ನಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಏಪ್ರಿಲ್ 6ರಂದು ಸೂರತ್ ನ ಭೇಸ್ತಾನ್ ನಗರದ ಕ್ರಿಕೆಟ್ ಮೈದಾನದ ಬಳಿ ಪೊಲೀಸರಿಗೆ ಬಾಲಕಿಯ ಮೃತದೇಹ ಸಿಕ್ಕಿದೆ. ಸತತ ಐದು ಗಂಟೆಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅತ್ಯಾಚಾರ ಎಸಗಿರುವುದು ಖಚಿತಗೊಂಡಿದೆ.
ಬಾಲಕಿಯ ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ 86 ಗಾಯಗಳು ಪತ್ತೆಯಾಗಿದ್ದು, 8 ದಿನಗಳ ಕಾಲ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ಬಾಲಕಿಗೆ ಮಾದಕ ದ್ರವ್ಯ ನೀಡಲಾಗಿತ್ತೇ ಎಂಬುದರ ಕುರಿತು ಪರೀಕ್ಷೆ ನಡೆಸಲು ಮಾದರಿ ತೆಗೆದುಕೊಂಡಿದ್ದೇವೆ ಎಂದು ಸಿವಿಲ್ ಆಸ್ಪತ್ರೆಯ ಫೊರೆನ್ಸಿಕ್ ಮುಖ್ಯಸ್ಥ ಗಣೇಶ್ ಗಾಂವ್ಕರ್ ಹೇಳಿದ್ದಾರೆ.
ಎಂಟು ದಿನ ಕಳೆದರೂ ಇನ್ನೂ ಪೋಷಕರ ಸುಳಿವು ಸಿಕ್ಕಿಲ್ಲ. ಹಾಗಾಗಿ ಬಾಲಕಿಯ ಚಿತ್ರವನ್ನು ರಾಜ್ಯ ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಗಿದೆ. ಕೃತ್ಯ ಎಸಗಿದವರು ಬೇರೆಲ್ಲೋ ಕೊಲೆ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ.ಝಾಲ ತಿಳಿಸಿದ್ದಾರೆ.
ಬಾಲಕಿ ಪೋಷಕರ ಕುರಿತು ಮಾಹಿತಿ ನೀಡಿದವರಿಗೆ ರಾಜಸ್ತಾನ ಪೊಲೀಸರು 20,000 ರು. ಬಹುಮಾನ ಘೋಷಿಸಿದ್ದಾರೆ. ಕಾಣೆಯಾದವರ ಪಟ್ಟಿಯನ್ನೂ ಪರಿಶೀಲಿಸಿ ಬಾಲಕಿಯ ಪೋಷಕರ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಯುತ್ತಿದೆ.