ದೇಶ

ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಎಲ್ಲಾ ಆರೋಪಿಗಳ ಖುಲಾಸೆ, ನಾಂಪಲ್ಲಿ ನ್ಯಾಯಾಲಯ ತೀರ್ಪು

Manjula VN
ಹೈದರಾಬಾದ್; ಹೈದರಾಬಾದ್'ನ 17ನೇ ಶತಮಾನದ ಹಳೆಯ ಮೆಕ್ಕಾ ಮಸೀದಿ ಸ್ಫೋಟಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 5 ಆರೋಪಿಗಳನ್ನು ನಾಂಪಲ್ಲಿ  ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
2007ರ ಮೇ. 18 ರಂದು ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಲಾಗಿತ್ತು. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ, 58ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 
ಸ್ಫೋಟ ಸಂಭವಿಸುತ್ತಿದ್ದಂತೆಯೇ ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗಿತ್ತು. ಬಳಿಕ ಹೈದರಾಬಾದ್ ಪೊಲೀಸ್ ಆಯುಕ್ತ ಬಲ್ವೀಂದರ್ ಸಿಂಗ್ ಅವರು ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. 
ಸ್ಫೋಟ ಪ್ರಕರಣ ಸಂಬಂಧ ಅಧಿಕಾರಿಗಳು ದೇಶದ ವಿವಿಧೆಡೆ 125 ಮುಸ್ಲಿಂ ಯುವಕರ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸಿದ್ದರು. ಬಂಧಿತರಲ್ಲಿ ಬಹುತೇಕರನ್ನು ಅತಿಥಿಗಳ ಗೃಹಗಳಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಂಧನದ ಬಳಿಕ ಎಸ್ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದ ಆರೋಪಿಗಳು, ಎಸ್ಐಟಿ ಅಧಿಕಾರಿಗಳು ಹಿಂಸಿಸುತ್ತಿದ್ದಾರೆಂದು ಹೇಳಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿದ್ದ ಕಾರಣ ಎಲ್ಲರನ್ನೂ ಖುಲಾಸೆಗೊಳಿಸಿತ್ತು. 
2011ರಲ್ಲಿ ಈ ಪ್ರಕರಣವನ್ನು ಸಿಬಿಐನಿಂದ ಎನ್ಐಎಗೆ ಹಸ್ತಾಂತರ ಮಾಡಲಾಗಿತ್ತು ಪ್ರಕರಣದ 10 ಜನರನ್ನು ಆರೋಪಿಗಳನ್ನು ಮಾಡಲಾಗಿತ್ತು. ಅದರಲ್ಲಿ ಐವರಾದ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಭರತ್ ಮೋಹನ್ ಲಾಲ್ ರತೇಶ್ವರ್, ಮೋಹನ್ ಲಾಲ್ ಚೌಧರಿಯನ್ನು ಬಂಧಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲರನ್ನೂ ಖುಲಾಸೆಗೊಳಿಸಿದೆ. 
SCROLL FOR NEXT