ದೇಶ

ಕತುವಾ ಅತ್ಯಾಚಾರ ಪ್ರಕರಣ: ಸಂತ್ರಸ್ಥೆ ಕುಟುಂಬ, ವಕೀಲರಿಗೆ ರಕ್ಷಣೆ ನೀಡಿ: ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಸೂಚನೆ

Lingaraj Badiger
ನವದೆಹಲಿ: ಕತುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ, ಸಂತ್ರಸ್ಥೆ ಪರ ವಕೀಲರಿಗೆ ಮತ್ತು ನ್ಯಾಯ ಪಡೆಯಲು ಕುಟುಂಬಕ್ಕೆ ಸಹಾಯ ಮಾಡುವವರಿಗೆ ಸೂಕ್ತ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.
ಪ್ರಕರಣವನ್ನು ಕತುವಾದಿಂದ ಚಂಢೀಗಢಕ್ಕೆ ವರ್ಗಾಯಿಸುವಂತೆ ಕೋರಿ ಸಂತ್ರಸ್ಥ ಬಾಲಕಿಯ ತಂದೆ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಕೋರ್ಟ್, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕಾಶ್ಮೀರ ಸರ್ಕಾರಕ್ಕೆ ಸೂಚಿಸಿದೆ.
ವಿಚಾರಣೆ ವೇಳೆ ಕಾಶ್ಮೀರ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ನನಗೆ ತೃಪ್ತಿ ಇದ್ದು, ಸಿಬಿಐ ತನಿಖೆ ಬೇಡ ಎಂದು ಸಂತ್ರಸ್ಥೆ ತಂದೆ ಹೇಳಿದ್ದಾರೆ.
ಈ ಹಂತದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವ ಉದ್ದೇಶ ನಮಗೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀ ಪೀಠ ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆಯಷ್ಟೇ ತನಗೂ ಜೀವ ಭಯ ಇದೆ ಎಂದಿದ್ದ ಸಂತ್ರಸ್ಥೆ ಪರ ವಕೀಲೆ ದೀಪಿಕಾ ಸಿಂಗ್ ರಾಜವತ್ ಅವರು, ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡದಂತೆ ಮಾಡಲು ನನ್ನನ್ನೂ ಅತ್ಯಾಚಾರ ಮಾಡಿ, ಹತ್ಯೆ ಮಾಡಬಹುದು ಎಂದು ಹೇಳಿದ್ದರು.
ಕಾಶ್ಮೀರದ ಕತುವಾದಲ್ಲಿ ನಡೆದಿದ್ದ 8 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನ್ಯಾಯಾಲಯದ ವಿಚಾರಣೆಗೆ ವಕೀಲರು ಅಡ್ಡಿಪಡಿಸುತ್ತಿರುವುದಕ್ಕೆ ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ಈ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಸಂಬಂಧಿಸಿದ ವಕೀಲರ ಸಂಘಗಳಿಂದ ವಿವರಣೆಯನ್ನೂ ಕೇಳಿತ್ತು. 
SCROLL FOR NEXT