ಚೆನ್ನೈ: ಪತ್ರಕರ್ತೆಯೊಬ್ಬರ ಕೆನ್ನೆ ಸವರಿ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪತ್ರಕರ್ತೆಯ ಕ್ಷಮೆಯಾಚಿಸಿದ್ದಾರೆ.
ರಾಜ್ಯಪಾಲ ಬನ್ವಾರಿಲಾಲ್ ಕ್ಷಮೆಯಾಚಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತ್ರಕರ್ತೆ ತಾವು ಇದರಿಂದ ಸಂತುಷ್ಟಗೊಂಡಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ರಾಜ್ಯಪಾಲ ಪುರೋಹಿತ್ ಅವರು ಕರೆದಿದ್ದ ಸುದ್ದಿಗೋಷ್ಠಿಗೆ ಆಗಮಿಸಿದ್ದ ಪತ್ರಕರ್ತೆ ಲಕ್ಷ್ಮೀ ಸುಬ್ರಮಣಿಯನ್ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಉತ್ತರಿಸುವ ಬದಲು ಪುರೋಹಿತ್ ಅವರು ಪತ್ರಕರ್ತೆಯ ಕೆನ್ನೆ ಸವರಿ ಮುಂದಕ್ಕೆ ಹೋಗಿದ್ದಾರೆ. ಈ ಘಟನೆ ವಿವಾದಕ್ಕೀಡಾಗಿತ್ತು.
ಕೆನ್ನೆ ಸವರಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯಪಾಲರು, ಲಕ್ಷ್ಮಿ ಸುಬ್ರಮಣಿಯನ್ ಅವರು ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಾತ್ಸಲ್ಯದಿಂದ ಕೆನ್ನೆ ಸವರಿದ್ದಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ಲಕ್ಷ್ಮಿ ಸುಬ್ರಮಣಿಯನ್ ನನ್ನ ಮೊಮ್ಮಗಳಿದ್ದಂತೆ, ಮೊಮ್ಮಗಳನ್ನು ವಾತ್ಸಲ್ಯದಿಂದ ಕಾಣುವ ರೀತಿಯಲ್ಲಿ ಲಕ್ಷ್ಮಿ ಸುಬ್ರಮಣಿಯನ್ ಅವರನ್ನೂ ಕಂಡಿದ್ದೇನೆ ಎಂದು ಬನ್ವಾರಿಲಾಲ್ ಹೇಳಿದ್ದರು.
ರಾಜ್ಯಪಾಲರ ಕ್ಷಮೆಯನ್ನು ಒಪ್ಪಿದರೂ, ಮನಸ್ಸಿಗೆ ನೋವುಂಟಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯಪಾಲರ ವರ್ತನೆ ಸೂಕ್ತವಾಗಿರಲಿಲ್ಲ ಎಂದು ಹೇಳಿದ್ದಾರೆ.