ಲಾತುರ್: ಜಸ್ಟಿಸ್ ಬಿಹೆಚ್ ಲೋಯಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರ ಸಹೋದರ ಶ್ರೀನಿವಾಸ್ ಲೋಯಾ ಹೇಳಿದ್ದಾರೆ.
ಮಹಾರಾಷ್ಟ್ರದ ಮರಾಠ್ ವಾಡಾ ಪ್ರಾಂತ್ಯದ ಲಾತುರ್ ನಲ್ಲಿ ಮಾತನಾಡಿದ ಶ್ರೀನಿವಾಸ್ ಲೋಯಾ, ಲೋಯಾ ಸಾವಿನ ಪ್ರಕರಣ ಸಂಬಂಧ ತಾವು ಯಾವುದೇ ಹೇಳಿಕೆ ನೀಡಿದರೂ ಅದು ನಿರರ್ಥಕ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಏನೂ ಇಲ್ಲ. ಏನು ಆಗಬಾರದಿತ್ತೋ ಅದು ಆಗಿ ಹೋಗಿದೆ. ಈಗ ನಾವು ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ರಂತಹ ದೊಡ್ಡ ಲಾಯರ್ ಗಳನ್ನೇ ಗಮದಲ್ಲಿಟ್ಟುಕೊಳ್ಳದ ಸುಪ್ರೀಂ ಕೋರ್ಟ್ ನ ಮುಂದೆ ನಾವು ಯಾವ ನಿರ್ಧಾರ ಅಥವಾ ನಡೆ ಕೈಗೊಂಡರೆ ಏನು ಪ್ರಯೋಜನ, ನಾವು ತುಂಬಾ ಚಿಕ್ಕವರು. ಉತ್ತಮ ಎಂದರೆ ನಾವು ಈ ಪ್ರಕರಣದಲ್ಲಿ ಯಾವುದೇ ರೀತಿಯ ಹೇಳಿಕೆ ನೀಡದೆ ಸುಮ್ಮನಿರುವುದು ಒಳ್ಳೆಯದು ಎಂದು ಶ್ರೀನಿವಾಸ್ ಲೋಯಾ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.
ಇನ್ನು ಜಸ್ಟಿಸ್ ಲೋಯಾ ಸಾವಿನ ಪ್ರಕರಣ ಸಂಬಂಧ ಇಂದು ಎಸ್ಐಟಿ ತನಿಖೆ ಕೋರಿ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಜಸ್ಟಿಸ್ ಎಎಂ ಖಾನ್ವಿಲ್ಕರ್ ಮತ್ತು ಜಸ್ಟಿಸ್ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಯಾವುದೇ ಅರ್ಹತೆಯಿಲ್ಲ ಮತ್ತು ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಧೀಶರ ಹೇಳಿಕೆಗಳನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ. ಜತೆಗೆ ಅರ್ಜಿದಾರರು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಪ್ರಕರಣದ ಎಸ್ ಐಟಿ ತನಿಖೆ ಕೋರಿ ಮಹಾರಾಷ್ಟ್ರ ಮೂಲದ ಪತ್ರಕರ್ತ ಬಿಎಸ್ ಲೋನೆ ಮತ್ತು ಸಾಮಾಜಿಕ ಕಾರ್ಯಕರ್ತ ತೆನ್ಸೆನ್ ಪೂನವಾಲ ಸ್ವತಂತ್ರ ಅರ್ಜಿ ಸಲ್ಲಿಕೆ ಮಾಡಿದ್ದರು.
ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾಗಿದ್ದ ಬಿಎಚ್ ಲೋಯಾ ಅವರು 2014ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆದರೆ ಈ ಸಾವಿನ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಲವು ಪೊಲೀಸ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics