ದೇಶ

ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ನಿಲುವಳಿಗೆ ಮುಂದಾದ ವಿಪಕ್ಷಗಳು: ಉಪ ರಾಷ್ಟ್ರಪತಿಗಳ ಭೇಟಿಗೆ ಚಿಂತನೆ

Manjula VN
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಪದತ್ಯುತಿ ನಿಲುವಳಿ ಮಂಡಿಸಲು ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿಯೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿವೆ ಎಂದು ಶುಕ್ರವಾರ ತಿಳಿದುಬಂದಿದೆ. 
ಕೆಲ ವಾರಗಳಿಂದ ತೆರೆಮನೆಯ ಹಿಂದೆ ನಡೆಯುತ್ತಿದ್ದ ಸಿದ್ಧತೆಗಳು, ನ್ಯಾಯಮೂರ್ತಿ ಲೋಯಾ ಸಾವಿನ ಕುರಿತಂತೆ ನೀಡಿದ್ದ ತೀರ್ಪಿನ ಬಳಿಕ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ. 
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಅವರು ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಭೇಟಿಗೆ ಅವಕಾಶವನ್ನು ಕೋರಿದ್ದು, ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸುವ ಕುರಿತು ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿಗೆ ನಿಲುವಳಿ ಮಂಡನೆ ಕುರಿತು ಚರ್ಚೆ ನಡೆಸಲು ಗುಲಾಂ ನಬಿ ಆಜಾದ್ ಅವರು ಇಂದು ಬೆಳಿಗ್ಗೆ ವಿರೋಧ ಪಕ್ಷಗಳ ಸಭೆ ಕರೆದಿದ್ದು , ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ,
ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ಬಗ್ಗೆ ಇನ್ನು ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನಿನ್ನೆ ನೀಡಿದ್ದ ತೀರ್ಪು ಇದೀಗ ವಿರೋಧ ಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. 
ಪ್ರಕರಣ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿಯವರು, ಭಾರತೀಯರು ಅತ್ಯಂತ ಬುದ್ಧಿವಂತರಾಗಿದ್ದಾರೆ. ಬಿಜೆಪಿ ಸೇರಿದಂತೆ ಹಲವು ಭಾರತೀಯರು ಅಮಿತ್ ಶಾ ಅವರ ಸತ್ಯವನ್ನು ಅರ್ಥೈಸಿಕೊಂಡಿದ್ದಾರೆ. ಸತ್ಯಕ್ಕೆ ತನ್ನದೇ ಆದ ಸ್ವತ ದಾರಿಯಿದ್ದು, ಅದನ್ನು ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ ಎಂದು ಹೇಳಿದ್ದರು. 

ಇದರಂತೆ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಕೂಡ ಮಾತನಾಡಿ, ಸುಪ್ರೀಂಕೋರ್ಟ್ ಬಗ್ಗೆ ಗೌರವವಿದೆ. ಆದರೆ, ನ್ಯಾ.ಲೋಯಾ ಕುರಿತ ತೀರ್ಪನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಸುಪ್ರೀಂಕೋರ್ಟ್ ತನ್ನ ಆದೇಶದ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿದಂತಿದೆ. ಲೋಯಾ ಅವರ ಸಾವು ಸಹಜವಾ ಅಥವಾ ಅಸಹಜವೋ ಎಂಬುದು ತನಿಖೆಯಿಂದಷ್ಟೇ ತಿಳಿಯಲಿದೆ ಎಂದು ತಿಳಿಸಿದ್ದರು.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ ಕುರಿತು ಲೋಯಾ ಅವರು ವಿಚಾರಣೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಆರೋಪಿಯಾಗಿದ್ದರು. ಲೋಯಾ 2014ರ ಡಿಸೆಂಬರ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗುತ್ತಿತ್ತು. 
ಇದಾದ ಕೆಲವೇ ದಿನಗಳಲ್ಲಿ ಶಾ ಅವರನ್ನು ಪ್ರಕರಣದಿಂದ ಆರೋಪಮುಕ್ತಗೊಳಿಸಲಾಗಿತ್ತು. ಈ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಆಗ್ರಹ ದೇಶದಾದ್ಯಂತ ಕೇಳಿ ಬಂದಿತ್ತು. ಆದರೆ, ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದರು. ಭಾರತದ ನ್ಯಾಯಾಂಗ ಇತಿಹಾಸ ಅತ್ಯಂತ ಕರಾಳ ದಿನ ಎಂದು ಬಣ್ಣಿಸಿದ್ದವು. 
SCROLL FOR NEXT