ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ನಿರ್ಧರಿಸಿರುವ ವಿರೋಧ ಪಕ್ಷಗಳು ಶುಕ್ರವಾರ ಉಪ ರಾಷ್ಟ್ರಪತಿಗಳನ್ನು ಭೇಟಿಯಾಗಿ ನೋಟಿಸ್ ನೀಡಿವೆ ಎಂದು ಶುಕ್ರವಾರ ತಿಳಿದುಬಂದಿದೆ.
ದೀಪಕ್ ಮಿಶ್ರಾ ಅವರ ವಿರುದ್ಧ ಪದತ್ಯುತಿ ನಿಲುವಳಿ ಮಂಡನೆಗೆ 60 ರಾಜ್ಯಸಭಾ ಸದಸ್ಯರು ಸಹಿ ಮಾಡಿದ್ದು, ಪ್ರಸ್ತಾವ ಮಂಡನೆಗೆ ಅವಕಾಶ ನೀಡುವಂತೆ ವೆಂಕಯ್ಯ ನಾಯ್ಡು ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಮತ್ತು ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ಸಂಸದರು ನಿಲುವಳಿ ಮಂಡನೆಗೆ ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದಾರೆಂದು ತಿಳಿದುಬಂದಿದೆ.
ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ವಿರೋಧ ಪಕ್ಷಗಳ ನಾಯಕರು ಇಂದು ಬೆಳಿಗ್ಗೆ ಸಭೆಯೊಂದನ್ನು ಏರ್ಪಡಿಸಿ ಚರ್ಚೆ ನಡೆಸಿದ್ದು. ಚರ್ಚೆಯಲ್ಲಿ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ಕುರಿತು ನಿರ್ಧಾರ ಕೈಗೊಂಡಿದ್ದರು.
ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಗುಲಾಂ ನಬಿ ಆಜಾದ್ ಅವರು, ಸಿಜೆಐ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ನಿರ್ಧರಿಸಿದ್ದೇವೆ. ನಿಲುವಳಿಗೆ 71 ಸಂಸದರು ಸಹಿ ಮಾಡಿದ್ದಾರೆ. 7 ಮಂದಿ ನಿವೃತ್ತಿ ಪಡೆದುಕೊಂಡ ಕಾರಣ ಇದರ ಸಂಖ್ಯೆ 64 ಆಗಿದೆ. ಅಗತ್ಯಕ್ಕಿಂತಲೂ ಹೆಚ್ಚಿನ ಸಹಿಗಳನ್ನು ಸಂಗ್ರಹಿಸಿದ್ದೇವೆ. ಸಭಾಪತಿಗಳು ಕ್ರಮ ಕೈಗೊಳ್ಳಲಿದ್ದಾರೆಂದು ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕೆಲ ವಾರಗಳಿಂದ ತೆರೆಮನೆಯ ಹಿಂದೆ ನಡೆಯುತ್ತಿದ್ದ ಸಿದ್ಧತೆಗಳು, ನ್ಯಾಯಮೂರ್ತಿ ಲೋಯಾ ಸಾವಿನ ಕುರಿತಂತೆ ನೀಡಿದ್ದ ತೀರ್ಪಿನ ಬಳಿಕ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ.
ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ಬಗ್ಗೆ ಇನ್ನು ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನಿನ್ನೆ ನೀಡಿದ್ದ ತೀರ್ಪು ಇದೀಗ ವಿರೋಧ ಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ ಕುರಿತು ಲೋಯಾ ಅವರು ವಿಚಾರಣೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಆರೋಪಿಯಾಗಿದ್ದರು. ಲೋಯಾ 2014ರ ಡಿಸೆಂಬರ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗುತ್ತಿತ್ತು.
ಇದಾದ ಕೆಲವೇ ದಿನಗಳಲ್ಲಿ ಶಾ ಅವರನ್ನು ಪ್ರಕರಣದಿಂದ ಆರೋಪಮುಕ್ತಗೊಳಿಸಲಾಗಿತ್ತು. ಈ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಆಗ್ರಹ ದೇಶದಾದ್ಯಂತ ಕೇಳಿ ಬಂದಿತ್ತು. ಆದರೆ, ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದರು. ಭಾರತದ ನ್ಯಾಯಾಂಗ ಇತಿಹಾಸ ಅತ್ಯಂತ ಕರಾಳ ದಿನ ಎಂದು ಬಣ್ಣಿಸಿದ್ದವು.