ನವದೆಹಲಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಅಪ್ರಾಪ್ತ ತಂದೆಯೊಬ್ಬ 2 ತಿಂಗಳ ಹಸುಗೂಸನ್ನು ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಹೊರಭಾಗದ ಮಂಗಳಪುರಿಯಲ್ಲಿ ಶನಿವಾರ ನಡೆದಿದೆ.
ಮಗುವಿನ ತಾಯಿ ಕೂಡ ಅಪ್ರಾಪ್ತೆಯಾಗಿದ್ದು, ಇಬ್ಬರಿಗೂ 10 ತಿಂಗಳ ಹಿಂದೆ ಮದುವೆಯಾಗಿದ್ದರು. ನಿನ್ನೆ ಮಗುವನ್ನು ಗಂಡನ ಬಳಿ ಬಿಟ್ಟ ಪತ್ನಿ ಕೆಲಸ ಹುಡುಕುವ ಸಲುವಾಗಿ ಹೊರಗೆ ಹೋಗಿದ್ದಳು. ಪಾಲಿಕ ಬಜಾರ್ ನಲ್ಲಿ ಸೇಲ್ಸ್ ಗರ್ಲ್ ಕೆಲಸ ಹುಡುಕಾಡಿಕೊಂಡು ಸಂಜೆ ವೇಳೆಗೆ ಮನೆಗೆ ಬಂದಿದ್ದಳು.
ಈ ವೇಳೆ ನಿಶ್ಚಲವಾಗಿ ಬಿದ್ದಿದ್ದ ಮಗುವನ್ನು ನೋಡಿ ಗಾಬರಿಗೊಂಡಿದ್ದಾಲೆ. ಪತಿ ಕೂಡ ಮನೆಯಲ್ಲಿರಲಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪರಿಶೀಲನೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಬಳಿಕ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆ ನಡೆಸಿದ ಪೊಲೀಸರು 17 ವರ್ಷದ ಆರೋಪಿ ಪತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ತಾನೇ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಆತನಿಂದಲೇ ಮಗುವನ್ನು ಪಡೆದಿದ್ದಳು. ಈ ಮಗು ನನ್ನದಲ್ಲ, ಹೀಗಾಗಿ ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ಆರೋಪಿ ವಿರುಗ್ಗ ಮೊಬೈಲ್ ಕಳ್ಳತನ ಸೇರಿ ಹಲವು ಪ್ರಕರಣಗಳು ಈ ಹಿಂದೆ ದಾಖಲಾಗಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ.