ಮುಂಬೈ: ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಎನ್ ಕೌಂಟರ್ ನಲ್ಲಿ ಸಾವಿಗೀಡಾದ ನಕ್ಸಲರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಕಳೆದ ಭಾನುವಾರ ಮಹಾರಾಷ್ಟ್ರದ ಗಡ್ ಚಿರೋಲಿಯ ಭಮರಗಡ್‌ನ ತಡಗಾಂವ ಅರಣ್ಯದಲ್ಲಿ ನಡೆದಿದ್ದ ನಕ್ಸಲ್ ಎನ್ ಕೌಂಟರ್ ನಲ್ಲಿ ಸಾವಿಗೀಡಾದ ನಕ್ಸಲರ ಸಂಖ್ಯೆ ಇದೀಗ 33ಕ್ಕೆ ಏರಿಕೆಯಾಗಿದೆ. ಎನ್ ಕೌಂಟರ್ ನಡೆದಿದ್ದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳಿ ಇಂದೂ ಶೋಧ ನಡೆಸಿತ್ತು. ಈ ವೇಳೆ ಮತ್ತೆ 11 ನಕ್ಸಲರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಭಾನುವಾರ ನಡೆದಿದ್ದ ಎನ್ ಕೌಂಟರ್ ನಲ್ಲಿ 12 ಮಂದಿ ನಕ್ಸಲರು ಹತರಾಗಿದ್ದರು. ಅದರಂತೆ ಕಾರ್ಯಾಚರಣೆಯಲ್ಲಿ ಈವರೆಗೂ ಸಾವನ್ನಪ್ಪಿದ ನಕ್ಸಲರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಪತ್ತೆಯಾದ ನಕ್ಸಲರು ಕೂಡ ಭಾನುವಾರದಂದೇ ಸಾವನ್ನಪ್ಪಿರುವ ಸಾಧ್ಯತೆ ಇದ್ದು, ನಕ್ಸಲರ ಮೃತದೇಹಗಳು ಡಿಕಂಪೋಸ್ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಯೋಧರಿಂದ ಗುಂಡೇಟು ತಿಂದಿದ್ದ ನಕ್ಸಲರು ತಪ್ಪಿಸಿಕೊಂಡಿದ್ದರು.
ಅಂದು ಆಗಿದ್ದ ಗುಂಡಿಟಿನಿಂದಲೇ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನು ಎನ್ ಕೌಂಟರ್ ನಡೆದಿದ್ದ ಗಡ್ ಚಿರೋಲಿಯ ಗ್ರಾಮವನ್ನು ಯೋಧರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಅಂದಿನಿಂದ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಯೋಧರು ಪರಾರಿಯಾಗಿದ್ದ ನಕ್ಸಲರಿಗಾಗಿ ಶೋಧ ನಡೆಸಿದ್ದರು. ಸಿ-60 ಕಮಾಂಡೋಗಳ ತಂಡದ ಸದಸ್ಯರು ಈ ಎನ್ ಕೌಂಟರ್ ನಡೆಸಿದ್ದರು.\