ಬಿಹಾರ: ರೈಲ್ವೆ ನೌಕರಿಗಾಗಿ ತಂದೆಗೇ ಸುಪಾರಿ ನೀಡಿದ ಮಗ!
ಪಟ್ನಾ(ಬಿಹಾರ): ತಂದೆಯ ಉದ್ಯೋಗ ನನಗೆ ದೊರಕಬೇಕೆಂದು ಮಗನೊಬ್ಬ ತನ್ನ ತಂದೆಗೇ ಸುಪಾರಿ ನಿಡಿ ಕೊಲ್ಲಿಸಿದ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ಸಂಭವಿಸಿದೆ.
ಭಾರತಿಯ ರೈಲ್ವೆನಲ್ಲಿ ನೌಕರರಾಗಿದ್ದ ಪ್ರಕಾಶ್ ಮಂಡಲ್ ಹತ್ಯೆಗೀಡಾದ ದುರ್ದೈವಿ ಎಂದು ತಿಳಿದುಬಂದಿದೆ. ಬಿಹಾರದ ಮುಂಗರ್ ಜಿಲ್ಲೆ ಈಸ್ಟ್ ಕಾಲೋನಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಪ್ರಕಾಶ್ ಮಂಡಲ್ ಇನ್ನೊಂದು ವಾರದಲ್ಲಿ ರೈಲ್ವೆ ನೌಕರಿಯಿಂದ ನಿವೃತ್ತಿಯಾಗುವವರಿದ್ದರು. ಮಂಗಳವಾರ ಬೆಳಿಗ್ಗೆ ಕಛೇರಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಹಾರಿಸಿದ ಗುಂಡಿನಿಂದ ಹತ್ಯೆಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಪ್ರಕಾಶ ಅವರನ್ನು ತಕ್ಷಣವೇ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಯಶಸ್ವಿಯಾಗದೆ ಅವರು ಅಸುನೀಗಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯವನ್ನಾಧರಿಸಿ ತನಿಖೆ ನಡೆಸಿದ್ದ ಪೋಲೀಸರು ಸುಪಾರಿ ಹಂತಕ ರವಿ ರಂಜನ್ (31) ಯನ್ನು ಬಂಧಿಸಿದ್ದಾರೆ.ರವಿಯನ್ನು ವಿಚಾರಣೆ ನಡೆಸಿದ ಪೋಲೀಸರಿಗೆ ಇನ್ನೋರ್ವ ಸುಪಾರಿ ಹಂತಕ ಸುನಿಲ್ ಮಂಡಲ್ಹಾಗೂ ಈ ಸಂಚು ರೂಪಿಸಿದ್ದ ಪ್ರಕಾಶ್ ಅವರ ಪುತ್ರ ಪವನ್ ಮಂಡಲ್ ಕುರಿತಂತೆ ಮಾಹಿತಿ ದೊರಕಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಕಳೆದ ಅನೇಕ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದ ಪವನ್ ಯಾವುದೇ ಕೆಲಸಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಏನಾದರೂ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲೇ ಬೇಕು ಎಂದು ಹಠಕ್ಕೆ ಬಿದ್ದ ಆತ ವಾಮಮಾರ್ಗ ಅನುಸರಿಸಿದ್ದಾನೆ. ಪೋಷಕರು ಸರ್ಕಾರಿ ನೌಕರರಾಗಿದ್ದು ಅಕಾಲಿಕ ಮರಣ ಹೊಂದಿದರೆ ಆ ನೌಕರಿಯು ಮಗ/ಮಗಳ ಪಾಲಾಗುವುದು ಎನ್ನುವುದನ್ನು ತಿಳಿದಿದ್ದ ಆತ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತನ್ನ ತಂದೆಯನ್ನೇ ಕೊಲ್ಲಲು ಸುಪಾರಿ ನೀಡಿದ್ದ.
"ಇನ್ನೇನು ನಿವೃತ್ತಿಯಾಗಲಿರುವ ಅವರನ್ನು ನಿವಾರಿಸಿದರೆ ಅನುಕಂಪದ ಆಧಾರದಲ್ಲಿ ನನಗೆ ಕೆಲಸ ದೊರಕುವುದು ಎಂದು ಬಗೆದ ಪವನ್ ಸುಪಾರಿ ಕೊಲೆಯ ಸಂಚು ರೂಪಿಸಿದ. ಅದರಂತೆ ಸುಪಾರಿ ಹಂತಕರನ್ನು ಸಂಪರ್ಕಿಸಿದ್ದ ಆತ 2 ಲಕ್ಷ ರೂ. ಗೆ ಒಪ್ಪಂದ ಮಾಡಿಕೊಂಡಿದ್ದನಲ್ಲದೆ ಒಂದು ಲಕ್ಷ ಮುಂಗಡ ಹಣ ಸಹ ಪಾವತಿ ಮಾಡಿದ್ದ" ಪೋಲೀಸರು ವಿವರಿಸಿದರು
ಸಧ್ಯ ಮೂವರೂ ಆರೋಪಿಗಳು ಕಂಬಿ ಹಿಂದಿದ್ದು ಮಧ್ಯವರ್ತಿಗಳಾಗಿದ್ದ ಇನ್ನಿಬ್ಬರು ಆರೋಪಿಗಳಿಗೆ ಸಹ ಬಲೆ ಬೀಸಲಾಗಿದೆ ಎಂದು ಪೋಲೀಸ್ ಮೂಲಗಳು ಹೇಳಿದೆ.