ಕಾವೇರಿ ವಿವಾದ: ನಿರ್ವಹಣಾ ಮಂಡಳಿ ಕರಡು ಯೋಜನೆಗೆ 2 ವಾರಗಳ ಕಾಲಾವಕಾಶಕ್ಕೆ ಕೇಂದ್ರ ಮನವಿ
ನವದೆಹಲಿ: ಕಾವೇರಿ ವಿವಾದ ಸಂಬಂಧ ಕಾವೇರಿ ಕಾರ್ಯನಿರ್ವಹಣೆ ಮಂಡಳಿ ರಚನೆ ನಿಲನಕ್ಷೆ ತಯಾರಿಗೆ ತಮಗೆ ಹೆಚ್ಚುವರಿಯಾಗಿ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಆರು ವಾರಗಳ ಒಳಗೆ ಕಾವೇರಿ ನಿರ್ವಹಣೆ ಮಂಡಳಿ ರಚಿಸಬೇಕೆಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ಸರ್ಕಾರ ಏಕೆ ಪಾಲಿಸಲಿಲ್ಲ? ಮಾರ್ಚ್ 31ಕ್ಕೆ ಮುನ್ನ ಈ ಸಂಬಂಧ ಕೋರ್ಟ್ ಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಳೆದ ಏ. 9ರಂದು ಸಹ ಸುಪ್ರೀಂ ಕೋರ್ಟ್ ಕೇಂದ್ರವನ್ನು ಟೀಕಿಸಿದ್ದು ಫೆಬ್ರವರಿ 16ರ ನ್ಯಾಯಾಲಯದ ತೀರ್ಪಿನ ಅನುಷ್ಥಾನಕ್ಕಾಗಿ ಮೇ 3ರೊಳಗೆ ಕರಡು ಯೋಜನೆ ರೂಪಿಸುವಂತೆ ಆದೇಶ ನಿಡಿತ್ತು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಶನಿವಾರ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ರಾಜ್ಯ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒಪ್ಪುವುದಿಲ್ಲ. ಇದು 'ಅಸಂವಿಧಾನಿಕ' ನಿಲುವು ಎಂದು ತಿಳಿಸಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಯಾವ ಕಾರ್ಯವಿಧಾನವನ್ನು ನಿರ್ದೇಶಿಸಲಿಲ್ಲ ಎಂದಿದ್ದರು.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತವಾ ರಾಯ್ ಹಾಗು ಎ.ಎಂ. ಖಾನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠವು ಫೆಬ್ರವರಿ 16ರಂದು ಕರ್ನಾಟಕ,, ತಮಿಳುನಾಡು ಮತ್ತು ಕೇರಳ ಮತ್ತು ಪುದುಚೆರಿಯ ನಡುವೆ ವಿವಾದಕ್ಕೀಡಾಗಿದ್ದ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಅಂತಿಮ ತೀರ್ಪನ್ನು ಪ್ರಕಟಿಸಿತ್ತು.
ತಮಿಳುನಾಡಿಗೆ 192 ಟಿಎಂಸಿಗೆ ಬದಲಾಗಿ 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ನ್ಯಾಯಪೀಠವು ಕರ್ನಾಟಕಕ್ಕೆ ಸೂಚಿಸಿದೆ.