ತ್ರಿಶೂರ್: ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಮಾವೋವಾದಿಗಳಿಂದ ಕೊಲೆ ಬೆದರಿಕೆ ಬಂದಿದ್ದು, ಪಿಣರಾಯಿ ವಿಜಯ್ ಅವರನ್ನು ಹತ್ಯೆ ಮಾಡುವ ಬಗ್ಗೆ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
ಪಾಲಕ್ಕಾಡ್ ನ ಪಝಾಯಣ್ಣೂರ್ ನ ಪೊಲೀಸ್ ಅಧಿಕಾರಿ ವರ್ಕ್ ಶಾಪ್ ಒಂದರಲ್ಲಿ ವಿಜಯನ್ ತಲೆ ಕಡಿಯುವ ಬಗ್ಗೆ ಮಾವೋವಾದಿಗಳು ಹಾಕಿದ್ದ ಪೋಸ್ಟರ್ ನ್ನು ಗಮನಿಸಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಘಟನೆಯನ್ನು ವಡಾಕಂಚೇರಿ ಮ್ಯಾಜಿಸ್ಟಿಯಲ್ ಕೋರ್ಟ್ ಗಮನಕ್ಕೆ ತರಲಾಗಿದೆ. "ಕೇರಳದ ನಕ್ಸಲ್ಬರಿ"ಯಿಂದ ಪೋಸ್ಟರ್ ನ್ನು ಅಂಟಿಸಲಾಗಿದ್ದು,
ಕಸ್ಟಡಿಯಲ್ಲಿ ಆರೋಪಿಗಳಿಗೆ ನೀಡಲಾಗುವ ಕಿರುಕುಳ, ಸಾವುಹಾಗೂ ಆದಿವಾಸಿ ಯುವಕನನ್ನು ಗುಂಪೊಂದು ಹೊಡೆದು ಹತ್ಯೆ ಮಾಡಿರುವ ವಿಷಯಗಳನ್ನು ಪೋಸ್ಟರ್ ನಲ್ಲಿ ಪ್ರಸ್ತಾಪಿಸಲಾಗಿದ್ದು, ಪಿಣರಾಯಿ ವಿಜಯನ್ ಈ ಘಟನೆಗಳನ್ನು ನಿರ್ವಹಿಸಲು ವಿಫಲರಾಗಿದ್ದು, ಅವರ ತಲೆ ಕಡಿಯುವುದಾಗಿ ಮಾವೊವಾದಿಗಳು ಜೀವ ಬೆದರಿಕೆ ಹಾಕಿದ್ದಾರೆ.
52 ವರ್ಷದ ಸಿಪಿಐಎಂ ನ ಬೆಂಬಲಿಗರೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಸ್ ಆರ್ ಶ್ರೀಜಿತ್ ಎಂಬ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದರು, ಈ ಯುವಕನಿಗೆ ಪೊಲೀಸರು ನಡೆಸಿದ್ದ ದೈಹಿಕ ಹಲ್ಲೆಯ ಪರಿಣಾಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಪಾಲಕ್ಕಾಡ್ ನಲ್ಲಿ ಬುದ್ಧಿಮಾಂದ್ಯ ಆದಿವಾಸಿ ಯುವಕನನ್ನು ಗುಂಪೊಂದು ದಾಳಿ ಮಾಡಿ ಹತ್ಯೆ ಮಾಡಿತ್ತು.