ದೇಶ

ಜನಾದೇಶದ ವಿರುದ್ಧ ಕುಟುಂಬದ ಆಕ್ರೋಶ; ಕಾಂಗ್ರೆಸ್ ರ್ಯಾಲಿ ವಿರುದ್ಧ ಅಮಿತ್ ಶಾ ವ್ಯಂಗ್ಯ

Srinivasamurthy VN
ನವದೆಹಲಿ: ಕಾಂಗ್ರೆಸ್ ಪಕ್ಷದ ಜನಾಕ್ರೋಶ ರ್ಯಾಲಿ ವಿರುದ್ಧ ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ,  ಜನಾದೇಶದ ವಿರುದ್ಧ ಕುಟುಂಬದ ಆಕ್ರೋಶ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ, ಕಾಂಗ್ರೆಸ್ ಪಕ್ಷ ತನ್ನ ಜನಾಕ್ರೋಶ ರ್ಯಾಲಿ ಹೆಸರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕುಟುಂಬದ ಆಕ್ರೋಶವನ್ನು ಹೊರ ಹಾಕುತ್ತಿದೆ. ಅಧಿಕಾರದ ದಾಹಕಕ್ಕಾಗಿ ದೇಶದ ಪ್ರತಿಯೊಂದು ಸಂವಿಧಾನಾತ್ಮಕ ಸಂಸ್ಥೆಗಳನ್ನು ಕಾಂಗ್ರೆಸ್ ಪಕ್ಷ ದುರುಪಯೋಗ ಪಡಿಸಿಕೊಂಡಿತ್ತು. ಈ ಬಗ್ಗೆ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಪಕ್ಷದ ಆಧಿಕಾರ ದಾಹ ರಾಜಕಾರಣದಿಂದ ದೇಶದ ಜನತೆ ರೋಸಿ ಹೋಗಿದ್ದಾರೆ. 
ಈಗ ಯಾರು ಜನಾಕ್ರೋಶದ ಹೆಸರಲ್ಲಿ ತಮ್ಮ ಕುಟುಂಬದ ಮತ್ತು ಅವರ ಬೆಂಬಲಿಗರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆಯೋ ಅವರ ವಂಶಪಾರಂಪರ್ಯ ಮತ್ತು ಅದರ 'ಆಸ್ಥಾನಿಕರನ್ನು ಜನಾದೇಶದ ಬಳಿಕ ಜನರೇ ಮನೆಗೆ ಅಟ್ಟುತ್ತಾರೆ. ಇಂದಿನ ಕಾಂಗ್ರೆಸ್ ಪಕ್ಷದ ಜನಾಕ್ರೋಶ ರ್ಯಾಲಿ ಕೇವಲ ಅದರ ಪರಿವಾರದ ಆಕ್ರೋಶದ ರ್ಯಾಲಿಯಾಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ.  ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಜನತೆಯ ಆಕ್ರೋಶ ನೋಡುಬೇಕು ಎಂದರೆ ಚುನಾವಣಾ ಫಲಿತಾಂಶದ ಬಳಿಕ ನೋಡಬೇಕು..ಕರ್ನಾಟಕದ ಸೋಲಿನ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಪ್ರಮುಖ ಹೆಜ್ಜೆಯನ್ನಿರಿಸಿದಂತಾಗುತ್ತದೆ. 
ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನ ತತ್ತರಿಸಿ ಹೋಗಿದ್ದು, ಪೊಳ್ಳು ಭರವಸೆ, ಭ್ರಷ್ಟಾಚಾರ ಮತ್ತು ಕೋಮುವಾದ ಅದನ್ನು ಸೋಲಿನೆಡೆಗೆ ತಳ್ಳುತ್ತಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.
SCROLL FOR NEXT