ಉಪ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಕವಿಂದರ್ ಗುಪ್ತಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸಿಎಂ ಮುಫ್ತಿ ಮೆಹಬೂಬ ತಮ್ಮ ಸಂಪುಟವನ್ನು ಪುನರ್ ರಚನೆ ಮಾಡಿದ್ದು, ಉಪ ಮುಖ್ಯಮಂತ್ರಿಯಾಗಿ ಕವಿಂದರ್ ಗುಪ್ತಾ ಸೇರಿದಂತೆ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಹಿಂದೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದ ಕವಿಂದರ್ ಗುಪ್ತಾ ಅವರು ಇದೀಗ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಎನ್ ಎನ್ ವೋಹ್ರಾ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಸ್ತುತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ 8 ಮಂದಿಯ ಪೈಕಿ ಕವಿಂದರ್ ಗುಪ್ತಾ ಅವರನ್ನು ಹೊರತು ಪಡಿಸಿದರೆ, 7 ಮಂದಿ ಸಚಿವರು ಸಂಪುಟಕ್ಕೆ ಹೊಸಬರಾಗಿದ್ದಾರೆ. ಇನ್ನು ಪ್ರಸ್ತುತ ಪ್ರಮಾಣ ವಚನ ಸ್ವೀಕರಿಸಿರುವ 8 ಮಂದಿ ಪೈಕಿ ಪಿಡಿಪಿ ಇಬ್ಬರು ಮತ್ತು ಬಿಜೆಪಿಯ 6 ಮಂದಿ ಶಾಸಕರು ಸೇರಿದ್ದಾರೆ.
ಕಾಶ್ಮೀರ ಬಿಜೆಪಿ ಘಟಕದ ಮುಖ್ಯಸ್ಥ ಸತ್ ಶರ್ಮಾ, ರಾಜೀವ್ ಜಸ್ರೋತಿಯಾ. ದೇವಿಂದರ್ ಕುಮಾರ್ ಮನ್ಯಾಲ್ ಸಚಿವರಾದ ಶಾಸಕರಾಗಿದ್ದಾರೆ. ಇದಲ್ಲದೆ ಕಥುವಾ ಮತ್ತು ಸಾಂಬಾ ಕ್ಷೇತ್ರ ಶಾಸಕರೂ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡೋಡಾ ಶಾಸಕ ಶಕ್ತಿ ರಾಜ್, ಕಾಶ್ಮೀರ ಪ್ರಧಾನಿ ಕಚೇರಿಯ ಸಚಿವ ಜೀತೇಂದ್ರ ಸಿಂಗ್ ಅವರಿಗೂ ಭಡ್ತಿ ನೀಡಲಾಗಿದೆ.
ಪಿಡಿಪಿ ಪಕ್ಷದಿಂದ ಪುಲ್ವಾಮ ಶಾಸಕ ಮಹಮದ್ ಖಲೀಲ್ ಬಂದ್ ಮತ್ತು ಸೋನ್ವಾರ್ ಶಾಸಕ ಮಹಮದ್ ಅಶ್ರಫ್ ಮಿರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನುಳಿದಂತೆ ಬಿಜೆಪಿಯ ಸಚಿವ ಸುನಿಲ್ ಶರ್ಮಾ ಅವರಿಗೆ ಸಂಪುಟದಲ್ಲಿ ಭಡ್ತಿ ನೀಡಲಾಗಿದ್ದು, ಅವರಿಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ನೀಡಲಾಗಿದೆ. ಪ್ರಸ್ತುತ ಅವರು ಸಾರಿಗೆ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ.
ಇನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕವಿಂದರ್ ಗುಪ್ತಾ ಪ್ರತಿಕ್ರಿಯಿಸಿ, ಅಭಿವೃದ್ಧಿ ಪರ ಕೆಲಸ ಮಾಡುವುದೇ ನಮ್ಮ ಆದ್ಯತೆ ಎಂದಿದ್ದಾರೆ. ಪಕ್ಷವು ಮೂರು ವರ್ಷಗಳ ನಂತರ ಬದವಾವಣೆಯನ್ನು ತರಲು ನನಗೆ ಜವಾಬ್ದಾರಿಯನ್ನು ನೀಡಿದೆ. ಜಮ್ಮು, ಕಾಶ್ಮೀರ್ ಮತ್ತು ಲಡಕ್‌ನ ಜನರ ನಿರೀಕ್ಷೆಗಳನ್ನು ಈಡೇರಿಸವತ್ತ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಅಸಾಮಾನ್ಯ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನತೆ ಎರಡೂ ಪಕ್ಷಗಳನ್ನು ಆಯ್ಕೆ ಮಾಡಿದ್ದಾರೆ. ಜನರ ಆದೇಶ ಪಾಲನೆಗಾಗಿ ಎರಡೂ ಪಕ್ಷಗಳು ಸೇರಿ ಸರ್ಕಾರ ರಚಿಸಲಾಗಿದ್ದು, ಉತ್ತಮ ಆಡಳಿತ ನೀಡಲಾಗುತ್ತದೆ ಎಂದರು.
ಕಣಿವೆ ರಾಜ್ಯದಲ್ಲಿ ಪಿಡಿಪಿ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಸಚಿವ ಸಂಪುಟ ಪುನರ್ ರಚನೆಗೆ ಬಿಜೆಪಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬಿಜೆಪಿಯ ಎಲ್ಲ ಸಚಿವರ ರಾಜೀನಾಮೆಯನ್ನು ಕೇಳಿದ್ದರು. ಅದರಂತೆ ಏ.17 ರಂದು ಬಿಜೆಪಿಯ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದರು.