ದೇಶ

ಏಮ್ಸ್ ನಿಂದ ಬಿಡುಗಡೆ ಮಾಡಿದ್ದರ ಹಿಂದೆ ರಾಜಕೀಯ ಪಿತೂರಿ: ಲಾಲೂ ಪ್ರಸಾದ್ ಯಾದವ್ ಆರೋಪ

Sumana Upadhyaya

ನವದೆಹಲಿ: ತಮ್ಮನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವುದರ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆರೋಪಿಸಿದ್ದಾರೆ.
ಅವರ ಆರೋಗ್ಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಏಮ್ಸ್ ಹೇಳಿದೆ.

ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿರುವ ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, ತಮ್ಮ ಆರೋಗ್ಯ ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಚಿಕಿತ್ಸೆಯನ್ನು ಮುಂದುವರಿಸಬೇಕೆಂದು ಹೇಳಿದ್ದಾರೆ.

ಇಂದು ಲಾಲೂ ಪ್ರಸಾದ್ ಯಾದವ್ ಅವರನ್ನು ಬಿಡುಗಡೆ ಮಾಡುತ್ತಿದ್ದಂತೆ ಅವರ ಬೆಂಬಲಿಗರು ಆಸ್ಪತ್ರೆ ಹೊರಗೆ ಗಲಭೆಯೆಬ್ಬಿಸಿದರು. ಲಾಲೂ ಅವರನ್ನು ಹತ್ಯೆ ಮಾಡಲು ಪಿತೂರಿ ನಡೆಯುತ್ತಿದೆ.ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರೂ ಕೂಡ ಒತ್ತಾಯಪೂರ್ವಕವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಗದ್ದಲವೆಬ್ಬಿಸಿದ ಬೆಂಬಲಿಗರು ಬಾಗಿಲುಗಳ, ಕಿಟಕಿಗಳ ಗ್ಲಾಸುಗಳನ್ನು ಒಡೆದರು. ಭದ್ರತಾ ಸಿಬ್ಬಂದಿ ಮೇಲೆ ಅವಹೇಳನ ಶಬ್ದಗಳನ್ನು ಬಳಸಿದ್ದಲ್ಲದೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕೂಡ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಲಾಲೂ ಪ್ರಸಾದ್ ಯಾದವ್ ಅವರನ್ನು ಏಮ್ಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ವಿಶೇಷ ಚಿಕಿತ್ಸೆಗಾಗಿ ಕಳೆದ ತಿಂಗಳು 29ರಂದು ಏಮ್ಸ್ ಗೆ ದಾಖಲಾಗಿದ್ದರು.

SCROLL FOR NEXT