ಪೋಲೀಸ್ ನೇಮಕಾತಿ ಅಭ್ಯರ್ಥಿಗಳ ಎದೆ ಭಾಗದಲ್ಲಿ ಜಾತಿ ಗುರುತು
ನವದೆಹಲಿ/ಲಖನೌ: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಪೋಲೀಸ್ ಹುದ್ದೆಗಾಗಿ ಮಡೆದ ಆಯ್ಕೆ ಪ್ರಕ್ರಿಯೆಯಲ್ಲಿ ದಲಿತ ಅಭ್ಯರ್ಥಿಗಳ ಎದೆ ಮೇಲೆ ಜಾತಿ ಗುರುತನ್ನು ಹಾಕಲಾದ ಪ್ರಸಂಗಕ್ಕೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಉಗ್ರವಾಗಿ ಖಂಡನೆ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಟೀಕಿಸಿದ್ದರೆ ಬಿಎಸ್ಪಿ ನಾಯಕಿ ಮಾಯಾವತಿ ಕೇಸರಿ ಪಕ್ಷದ "ಜಾತಿ ವರ್ತನೆ"ಯನ್ನು ಇದು ಪ್ರತಿಬಿಂಬಿಸಿದೆ ಎಂದಿದ್ದಾರೆ.
"ಇದೊಂದು ಅಮಾನವೀಯ ಘಟನೆ" ಎಂದಿರುವ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಪ್ರಧಾನಿ ಕಛೇರಿಯನ್ನು ಒತ್ತಾಯಿಸಿದೆ.
"ಜಾತಿವಾದಿ ವರ್ತನೆಯೊಡನೆ ರಾಷ್ಟ್ರದ ಹೃದಯವನ್ನೇ ಹತ್ಯೆ ಮಾಡಲಾಗುತ್ತಿದೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಬಿಜೆಪಿ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ದಲಿತರನ್ನು ’ಹೊಸದಾಗಿ ಪ್ರೀತಿಸುವ’ ನೂತನ ಉದಾಹರಣೆ ಇದಾಗಿದೆ ಎಂದು ಬಿಎಸ್ಪಿ ಅಧಿನಾಯಕಿ ಆರೋಪಿಸಿದ್ದಾರೆ.
"ಎಸ್ಸಿ" (ಪರಿಶಿಷ್ಟ ಜಾತಿ), "ಎಸ್ಟಿ" (ಪರಿಶಿಷ್ಟ ಪಂಗಡ) ಮತ್ತು "ಜಿ" (ಜನರಲ್) ಗುರುತಿರುವ ವ್ಯಕ್ತಿಗಳ ಚಿತ್ರ ವಿವಿಧ ಮಾದ್ಯಮಗಳಲ್ಲಿ ಪ್ರಸಾರಗೊಂಡ ಬಳಿಕ ಧಾರ್ ಜಿಲ್ಲೆಯಲ್ಲಿ ನಡೆದಿದ್ದ ಘಟನೆ ಸಂಬಂಧ ಪೋಲೀಸರು ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣ ಕುರಿತು ಉಪ ಸಬ್ ಇನ್ಸ್ ಪೆಕ್ಟರ್ ಮಟ್ಟದ ತನಿಖೆಗೆ ತಾವು ಆದೇಶಿಸಿದ್ದಾಗಿ ಧಾರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ವೀರೇಂದ್ರ ಸಿಂಗ್ ಪಿಪಿಐಗೆ ತಿಳಿಸಿದ್ದಾರೆ
ಪೋಲೀಸ್ ಪೇದೆ ಹುದ್ದೆ ನೇಮಕಾತಿಗಾಗಿ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಅಭ್ಯರ್ಥಿಗಳ ಎದೆಯ ಮೇಲೆ ಎಸ್ಸಿ, ಎಸ್ಟಿ ಜಾತಿ ಗುರುತು ಹಾಕಲಾಗಿತ್ತು. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಹಲವು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು