ಬೆಂಗಳೂರು: ವಿಜ್ಞಾನಿಯೊಬ್ಬರ ದಿಢೀರ್ ವರ್ಗಾವಣೆಯೊಂದು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದು, ಕೂಡಲೇ ಇಸ್ರೋ ವ್ಯವಹಾರಗಳಲ್ಲಿ ಗಮನಹಿರಿಸಿ ತುರ್ತು ಮಧ್ಯ ಪ್ರವೇಶ ಮಾಡಬೇಕು ಎಂದು ಹಿರಿಯ ವಿಜ್ಞಾನಿಗಳ ತಂಡವೊಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಇಸ್ರೋದ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಅವರ ವರ್ಗಾವಣೆ ವಿಚಾರ ಇದೀಗ ಇಸ್ರೋದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದ್ದು, ಇಸ್ರೋ ವ್ಯವಹಾರಗಳಲ್ಲಿ ರಾಜಕೀಯ ತಲೆದೂರುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತಪನ್ ಮಿಶ್ರಾ ವರ್ಗಾವಣೆಯನ್ನು ವಿರೋಧಿಸಿ ಇಸ್ರೋದ ಹಿರಿಯ ವಿಜ್ಞಾನಿಗಳಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನ ಮಾಜಿ ಮುಖ್ಯ ವಿಜ್ಞಾನಿ ಗೌಹಾರ್ ರಾಝಾ, ಮೈಸೂರು ವಿಶ್ವವಿದ್ಯಾಲಯದ ವಿಶೇಷ ಪ್ರಾಧ್ಯಾಪಕ ಮತ್ತು ವಿಜ್ಞಾನಿ ಮೇವಾ ಸಿಂಗ್, ವಿಗ್ಯಾನ್ ಪ್ರಸಾರ ಸಂಸ್ಥೆಯ ಮಾಜಿ ನಿರ್ದೇಶಕ ಸುಭಾದ್ ಮಹಂತಿ ಸೇರಿದಂತೆ ಒಟ್ಟು 25 ಮಂದಿ ವಿಜ್ಞಾನಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ತಪನ್ ಮಿಶ್ರಾ ಅವರ ವರ್ಗಾವಣೆ ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ವಿಜ್ಞಾನಿಗಳು, ಇಸ್ರೋ ಯೊಜನೆಯೊಂದರ ಅನಗತ್ಯ ವಿಳಂಬಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತು ಇಸ್ರೋವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಅಡ್ಡಿಯಾದ್ದರಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವಿಜ್ಞಾನಿಗಳು ಆರೋಪಿಸಿದ್ದಾರೆ.
ಒಂದು ವೇಳೆ ವರ್ಗಾವಣೆ ರಾಜಕೀಯ ಪ್ರೇರಿತವೇ ಆಗಿದ್ದರೆ ಇದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಈ ವರ್ಗಾವಣೆ ಮೂಲಕ ಅಧಿಕಾರ ಶಾಹಿಗಳು ತಮ್ಮ ಮಾತು ಕೇಳದಿದ್ದರೆ ವರ್ಗಾವಣೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದು, ಇಸ್ರೋ ಅಭಿವೃದ್ದಿಗೆ ಇದು ಖಂಡಿತಾ ಕಂಟಕವಾಗಲಿದೆ ಎಂದು ಪತ್ರದಲ್ಲಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.