ರಾಫೆಲ್ ಡೀಲ್, ಅಸ್ಸಾಂ ಎನ್ ಆರ್ ಸಿ ವಿಷಯದಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧಾರ
ನವದೆಹಲಿ: ಇತ್ತೀಚೆಗಷ್ಟೇ ರಚನೆಯಾಗಿದ್ದ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಆ.04 ರಂದು ಸಭೆ ನಡೆಸಿದ್ದು, ರಾಫೆಲ್ ಡೀಲ್, ಅಸ್ಸಾಂ ಎನ್ ಆರ್ ಸಿ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನಿಸಿದೆ.
ಈ ಎರಡು ವಿಷಯಗಳೊಂದಿಗೆ ಪಿಎನ್ ಬಿ ಹಗರಣವನ್ನೂ ಹೋರಾಟದ ಭಾಗವಾಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಮಾಡಿರುವ ವಂಚನೆ ಪ್ರಕರಣವನ್ನು ಅಸ್ತ್ರವಾಗಿ ಬಳಸಿಕೊಂಡು ಮೋದಿ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಸಿಡಬ್ಲ್ಯುಸಿ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ.
ಕಾಂಗ್ರೆಸ್ ಎನ್ ಆರ್ ಸಿ ವಿರುದ್ಧವಿಲ್ಲ, ಆದರೆ ಅಸ್ಸಾಂ ಅಕಾರ್ಡ್ ನ ಅನುಗುಣವಾಗಿ ಈ ಪ್ರಕ್ರಿಯೆ ನಡೆಯಬೇಕೆಂದು ಸಿಡಬ್ಲ್ಯೂಸಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಮೋದಿ ಸರ್ಕಾರ ಈ ವಿಷಯವನ್ನು ನಿರ್ವಹಣೆ ಮಾಡುತ್ತಿರುವ ರೀತಿಯಿಂದ ಅಸ್ಸಾಂ ನಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ.