ನಕ್ಸಲ್ ಭಯ: ಆರ್ಟೀರಿಯಲ್ ರಸ್ತೆ ಯೋಜನೆ ಕೈಬಿಟ್ಟ ಗುತ್ತಿಗೆದಾರರು, ಕಾಮಗಾರಿ ಪೂರ್ಣಗೊಳಿಸಲು ಕೈ ಜೋಡಿಸಿದ ಯೋಧರು!
ನವದೆಹಲಿ: ಇದೇ ಮೊದಲ ಬಾರಿಗೆ ಸಿಆರ್ ಪಿಎಫ್ ಬಂದೂಕು ಹಿಡಿಯುವ ಬದಲು ರಸ್ತೆ ನಿರ್ಮಾಣ ಕಾಮಗಾರಿಗೆ ಕೈಹಾಕಿದೆ. ಈ ಬೆಳವಣಿಗೆ ನಡೆದಿರುವುದು ಚತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶದಲ್ಲಿ.
ಚತ್ತೀಸ್ ಗಢದ ಬಸ್ತಾರ್ ನಕ್ಸಲ್ ಪೀಡಿತ ಪ್ರದೇಶ. ಇದೇ ಭಾಗದಲ್ಲಿ ನಿರ್ಮಾಣವಾಗಬೇಕಿದ್ದ ಆರ್ಟಿರಿಯಲ್ ರಸ್ತೆ ಯೋಜನೆಗೆ ಸಾಕಷ್ಟು ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ ಹೊರತಾಗಿಯೂ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾವುದೇ ಗುತ್ತಿಗೆದಾರರೂ ಸಹ ಮುಂದೆ ಬರಲಿಲ್ಲ. ಆದರೆ ಆಪತ್ಬಾಂಧವನ ಪಾತ್ರ ವಹಿಸುವುದರಲ್ಲಿ ಸದಾ ಮುಂದಿರುವ ಸೇನೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದಿದ್ದು ಗುತ್ತಿಗೆದಾರನ ಪಾತ್ರ ವಹಿಸಲು ಮುಂದಾಗಿದೆ.
ನಕ್ಸಲರನ್ನು ಬೇಟೆಯಾಡುವುದರಲ್ಲಿ ನಿರತವಾಗಿರುತ್ತಿದ್ದ ಸಿಆರ್ ಪಿಎಫ್ ತಂಡ ಇದೇ ಮೊದಲ ಬಾರಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು, ದಕ್ಷಿಣ ಬಿಜಾಪುರ್ ಜಿಲ್ಲೆಯಲ್ಲಿನ ಭೈರಮ್ ಘರ್ ಹಾಗೂ ಕೆಶ್ಕುತುರ್ ನಡುವೆ 4.5 ಕಿಮೀ ವ್ಯಾಪ್ತಿಯ ಆರ್ ಸಿ ಸಿ ರಸ್ತೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿದೆ.
ನಕ್ಸಲರಿಗೆ ಭಯಪಟ್ಟು ರಸ್ತೆ ನಿರ್ಮಾಣ ಕಾಮಗಾರಿಯ ಯೋಜನೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವುದೇ ಖಾಸಗಿ ಗುತ್ತಿಗೆದಾರನೂ ಮುಂದಾಗಲಿಲ್ಲ, ಸಿಆರ್ ಪಿಎಫ್ ಕೈಗೆತ್ತಿಕೊಂಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೆರ್ಮಪಾರಾದಲ್ಲಿ ಕಲ್ವರ್ಟ್ ನ್ನು ಮಾತ್ರ ನಿರ್ಮಾಣ ಮಾಡಬೇಕಿದೆ. ಮುಂಗಾರಿನಿಂದ ಕಾಮಗಾರಿ ನಿಧಾನಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ ಎಂದು ಸಿಆರ್ ಪಿಎಫ್ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಅರೋರ ಮಾಹಿತಿ ನೀಡಿದ್ದಾರೆ.
191ನೇ ಬೆಟಾಲಿಯನ್ ನ ಕಮಾಂಡಿಂಗ್ ಅಧಿಕಾರಿ ಈ ಯೋಜನೆಗೆ ಗುತ್ತಿಗೆದಾರರಾಗಿದ್ದು, ಸಿಆರ್ ಪಿಎಫ್ ನ ಇಂಜಿನಿಯರ್ ಗಳು 2015 ರಿಂದ ಈ ಉಸ್ತುವಾರಿ ವಹಿಸಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಭದ್ರತೆ, ಆಹಾರಗಳನ್ನು ನೀಡಲಾಗಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ ಎಂದಿದ್ದಾರೆ ಸಿಆರ್ ಪಿಎಫ್ ಅಧಿಕಾರಿಗಳು.
ರಸ್ತೆ ನಿರ್ಮಾಣ ಕಾಮಗಾರಿ ಯೋಜನೆ ಹಲವು ವರ್ಷಗಳಿಂದ ಇತ್ತು, ಆದರೆ ಯಾವ ಖಾಸಗಿ ಗುತ್ತಿಗೆದಾರರೂ ನಕ್ಸಲರ ಭಯದಿಂದ ಅದನ್ನು ಕೈಗೆತ್ತಿಕೊಳ್ಳಲು ಮುಂದಾಗಿರಲಿಲ್ಲ ಎಂದು ಸಿಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.