ಕೇಂದ್ರ ಸಚಿವ ನಿತಿನ್ ಗಡ್ಕರಿ
ಔರಂಗಾಬಾದ್: ಉದ್ಯೋಗಾವಕಾಶಗಳೇ ಇಲ್ಲದಿರುವಾಗ ಮೀಸಲಾತಿ ನೀಡಿದರೂ, ಉದ್ಯೋಗ ಭದ್ರತೆಗಳು ಸಿಗುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೀಸಲಾತಿ ನೀಡಿರುವ ಬಗ್ಗೆ ಊಹಿಸಿಕೊಳ್ಳೋಣ. ಆದರೆ, ಉದ್ಯೋಗಾವಕಾಶಗಳೇ ಇಲ್ಲ. ಬ್ಯಾಂಕಿಂಗ್ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಗಳೂ ಕೂಡ ಸ್ಥಗಿತಗೊಂಡಿವೆ. ಇನ್ನು ಉದ್ಯೋಗಗಳೆಲ್ಲಿವೆ? ಎಂದು ಪ್ರಶ್ನಿಸಿದ್ದಾರೆ.
ಹಿಂದುಳಿದ ವರ್ಗಗಳಿಗಿರುವ ಮೀಸಲಾತಿ ಇಂದು ರಾಜಕೀಯ ಇಚ್ಛಾಶಕ್ತಿಯಾಗಿ ಮಾರ್ಪಟ್ಟಿವೆ. ಇದು ಪ್ರಮುಖ ಸಮಸ್ಯೆಯಾಗಿದೆ. ನಾನು ಹಿಂದುಳಿದ ವ್ಯಕ್ತಿಯೆಂದು ಎಲ್ಲರೂ ಹೇಳುತ್ತಾರೆ. ಬಿಹಾರ, ಉತ್ತರಪ್ರದೇಶಗಳಲ್ಲಿ ಬ್ರಾಹ್ಮಣರು ಪ್ರಬಲರಾಗಿದ್ದು, ರಾಜಕೀಯದಲ್ಲಿ ಹಿಡಿತ ಸಾಧಿಸಿದ್ದಾರೆ. ಅಲ್ಲಿ ಅವರೂ ತಾವು ಹಿಂದುಳಿದವರು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಬಡವರು ಬಡವರಾಗಿಯೇ ಉಳಿದಿದ್ದಾರೆ. ಅವರಿಗೆ ಯಾವುದೇ ಜಾತಿ, ಮತ ಅಥವಾ ಭಾಷೆ ಇಲ್ಲ. ಧರ್ಮ ಯಾವುದಾದರೂ ಸರಿ ಎಲ್ಲಾ ಸಮುದಾಯಗಳಲ್ಲಿ ತೊಡಲು ಬಟ್ಟೆ ಇಲ್ಲದವರು, ತಿನ್ನಲು ಆಹಾರ ಇಲ್ಲದವರದ್ದೊಂದು ವರ್ಗ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಮೀಸಲಾತಿ ಸಾಮಾಜಿಕ ಆರ್ಥಿಕ ಚಿಂತನೆಯಾಗಿದ್ದು, ಇದನ್ನು ರಾಜಕೀಯಕ್ಕಾಗಿ ಬಳಕೆ ಮಾಡಬಾರದು. ಜವಬ್ದಾರಿಯುತ ರಾಜಕೀಯ ಪಕ್ಷಗಳು ಈ ಹೋರಾಟಕ್ಕೆ ತುಪ್ಪ ಸುರಿಯುವ ಕೆಲಸವನ್ನು ಮಾಡಬಾರದು. ಅಭಿವೃದ್ಧಿ, ಕೈಗಾರೀಕರಣ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಿರುವುದರಿಂದ ಆರ್ಥಿಕ ಅಸಮಾನತೆಯನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos