ಚೆನ್ನೈ: ಮಗಳ ಜೊತೆ ಸಲಿಗೆ ಬೇಡ ಎಂದು ಹೇಳಿದ್ದ ಅತ್ತೆಯನ್ನೇ 15 ವರ್ಷದ ಸೋದರಳಿಯ ಟೆಡ್ಡಿ ಬೇರ್‌ನಿಂದ ಉಸಿರು ಗಟ್ಟಿಸಿ, ಚಾಕುವಿನಿಂದ ಎಡಗೈನ ಮಣಿಕಟ್ಟು ಪ್ರದೇಶವನ್ನು ಕತ್ತರಿಸಿ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 35 ವರ್ಷದ ತಮಿಳ್ ಸೆಲ್ವಿ ಎಂದು ಗುರುತಿಸಲಾಗಿದೆ. ಶಂಕರ್ ಸುಬ್ಬು ಎಂಬುವರ ಜತೆ ತಮಿಳ್ ಸೆಲ್ವಿ ಮದುವೆಯಾಗಿದ್ದರು. ದಂಪತಿ ಚೆನ್ನೈನ ಅಮಿಂಜಿಕರಾಯ್ ವೆಲ್ಲಲಾರ್ ರಸ್ತೆಯಲ್ಲಿ ವಾಸವಾಗಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಳು. ಇನ್ನು ನಾಲ್ಕು ವರ್ಷದ ಮಗನಿದ್ದ. ರೇಷನ್ ಅಂಗಡಿ ಇಟ್ಟುಕೊಂಡಿದ್ದ ಶಂಕರ್ ಸುಬ್ಬ ಶುಕ್ರವಾರ ಮನೆಗೆ ಬಂದಾಗ ಅಲ್ಲಿ ಪತ್ನಿ ರಕ್ದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ತಮಿಳ್ ಸೆಲ್ವಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ.
ನಂತರ ಶಂಕರ್ ಅಮಿಂಜಿಕರಾಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ತನಿಖೆಗೆ ಶುರು ಮಾಡಿದ ಪೊಲೀಸರು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಮನೆಗೆ ಬಾಲಕನೊರ್ವ ಬಂದು ಹೋಗಿದ್ದು ಗೊತ್ತಾಗಿದೆ. ಶಂಕರ್ ಸುಬ್ಬ ಸಿಸಿಟಿವಿ ದೃಶ್ಯಾವಳಿಯಲ್ಲಿದ್ದ ಬಾಲಕನನ್ನು ಗುರುತಿಸಿ ಆತ ತನ್ನ ಸೋದರಳಿಯ ಎಂದು ಹೇಳಿದ್ದಾರೆ.
ಕೂಡಲೇ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನನ್ನ ಅತ್ತೆ ಮಗಳ ಜತೆ ಸಲಿಗೆಯಿಂದ ಇರಬೇಡ ಎಂದು ಬೈದಿದ್ದರು. ಇದಕ್ಕೆ ಕೋಪಗೊಂಡು ಅವರನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾರೆ.