ದೇಶ

ಜಮ್ಮು ಮತ್ತು ಕಾಶ್ಮೀರ: ಏನಿದು ಕಲಂ 35ಎ? ಸಂವಿಧಾನದ ಪರಿಚ್ಛೇದದ ಕುರಿತು ವಾದ-ವಿವಾದಗಳೇಕೆ?

Srinivasamurthy VN
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ವಿಶೇಷ ಅಧಿಕಾರ ನೀಡುವ ಕಲಂ 35 ಎ ಕುರಿತು ಇದೀಗ ಎಲ್ಲಡೆ ಭಾರಿ ಚರ್ಚೆಗಳು ನಡೆಯುತ್ತಿದೆ. ಹಾಗಾದರೇ ಏನಿದು ಈ ಕಲಂ35ನ ವಿವಾದ ಎಂಬ ಪ್ರಶ್ನೆಗೆ ಇಲ್ಲಿ ಸೂಕ್ಷ್ಮವಾಗಿ ಉತ್ತರಿಸುವ ಪ್ರಯತ್ನ ಮಾಡಲಾಗಿದೆ.
ಏನಿದು ಕಲಂ 35ಎ?
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ನಾಗರೀಕರಿಗೆ ವಿಶೇಷ ಅಧಿಕಾರ ನೀಡುವ ಸಂವಿಧಾನ ಒಂದು ಭಾಗವೇ ಈ ಪರಿಚ್ಛೇದ 35ಎ.  ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಕೂಡ ಅಲ್ಲಿ ಅಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. 
ಅಲ್ಲದೆ ಇಲ್ಲಿನ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು. ಆ ಮೂಲಕ ಸಂವಿಧಾನಕ್ಕೆ ಈ ಪರಿಚ್ಛೇದ ಸೇರ್ಪಡೆಯಾಗಿತ್ತು.
ವಿವಾದವೇಕೆ? ಅರ್ಜಿದಾರರ ವಾದವೇನು?
ಪ್ರಸ್ತುತ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದಗಳು ಕೇಳಿಬರುತ್ತಿದ್ದು, ಭಾರತೀಯ ನಾಗರಿಕರಿಗೆ ದೇಶದ ಯಾವುದೇ ಜಾಗದಲ್ಲಿ ಆಸ್ತಿ ಹೊಂದುವ ಹಕ್ಕಿದೆ ಎಂಬ ಅಂಶ ಸಂವಿಧಾನದಲ್ಲಿದೆ. ಹೀಗಿರುವಾಗ ಕಲಂ 35ಎ ಇದರ ಉಲ್ಲಂಘನೆಯಾಗುತ್ತದೆ.  ದೇಶದ ಯಾವುದೇ ಭಾಗದಲ್ಲಿ ಆಸ್ತಿ ಹೊಂದಲು ಮತ್ತು ವಾಸ ಮಾಡಲು ಭಾರತದ ನಾಗರಿಕರಿಗೆ ಮೂಲಭೂತ ಹಕ್ಕಿದೆ. ಇದನ್ನು 35ಎ ಉಲ್ಲಂಘಿಸುತ್ತದೆ. ಅಲ್ಲದೆ, ದೇಶದ ಸಂವಿಧಾನಕ್ಕೆ ಸಂಸತ್‌ ನಲ್ಲಿ ಮಾತ್ರ ತಿದ್ದುಪಡಿ ತರಲು ಸಾಧ್ಯ. ಆದರೆ 35ಎಯನ್ನು ಸಂಸತ್‌ ನ ಹೊರಗೆ, ರಾಷ್ಟ್ರಪತಿಗಳು ವಿಶೇಷಾಧಿಕಾರ ಬಳಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ.
ರಾಜ್ಯದವರ ವಾದವೇನು?
ಇನ್ನು ಅರ್ಜಿದಾರರ ವಾದಕ್ಕೆ ಕಾಶ್ಮೀರ ಸರ್ಕಾರ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, 35ಎ ರದ್ದಾದರೆ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾದೀತು ಎಂದು ಆತಂಕ ವ್ಯಕ್ತಪಡಿಸಿದೆ. 35ಎ ರದ್ದುಪಡಿಸುವುದಕ್ಕೆ ಪ್ರತ್ಯೇಕತಾವಾದಿ ಸಂಘಟನೆಗಳೂ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿವೆ.  ಕಲಂ 35ಎ ಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮುಂದಾಗಿರುವುದನ್ನು ಪ್ರತಿಭಟಿಸಿ ಪ್ರತ್ಯೇಕವಾದಿಗಳು ಕರೆ ನೀಡಿದ್ದ ಎರಡು ದಿನಗಳ ಬಂದ್‌ ಗೆ ಭಾನುವಾರ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
SCROLL FOR NEXT