ದೇಶ

ಇಂದು ಸ್ವಾಮಿ ವಿವೇಕಾನಂದ ಇದ್ದಿದ್ದರೆ ಅವರ ಮೇಲೂ ಕಪ್ಪುಮಸಿ ದಾಳಿಯಾಗುತ್ತಿತ್ತು: ಶಶಿ ತರೂರ್

Srinivasamurthy VN
ತಿರುವನಂತಪುರ: ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಗೆ ಕಿಡಿಕಾರುವ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶಶಿತರೂರ್ ಅವರು, 'ಇಂದು ಸ್ವಾಮಿ ವಿವೇಕಾನಂದ ಇದ್ದಿದ್ದರೆ ಅವರ ಮೇಲೂ ಕಪ್ಪುಮಸಿ ದಾಳಿಯಾಗುತ್ತಿತ್ತು ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಿರುವನಂತಪುರದದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿತರೂರ್ ಅವರು, ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಗೆ ಕಿಡಿಕಾರಿದರು. ಅಲ್ಲದೆ 'ಪಶ್ಚಿಮದಲ್ಲಿ ಭಾರತೀಯ ತತ್ವಜ್ಞಾನ ಪರಿಚಯಿಸಿದ್ದ 19ನೇ ಶತಮಾನದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು ಇಂದು ಇದ್ದಿದ್ದರೆ ಮಾನವೀಯತೆಯ ಪ್ರತಿಪಾದನೆಗಾಗಿ ತೀವ್ರ ಹಿಂಸಾತ್ಮಕ ದಾಳಿಯನ್ನು ಎದುರಿಸಬೇಕಾಗುತ್ತಿತ್ತು. ದಾಳಿಯಷ್ಟೇ ಅಲ್ಲ ಅವರ ಮೇಲೆ ಕಪ್ಪುಮಸಿ ಕೂಡ ಸುರಿಯಲಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಕಳೆದ ತಿಂಗಳು 79 ವರ್ಷದ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಒಂದು ವೇಳೆ ಸ್ವಾಮಿ ವಿವೇಕಾನಂದರು ಇಂದು ಭಾರತಕ್ಕೆ ಬಂದರೆ, ಅವರು ಕೂಡ ಈ ಗೂಂಡಾಗಳ ದಾಳಿಗೆ ಗುರಿಯಾಗುತ್ತಿದ್ದರು. ಗೂಂಡಾಗಳು ಎಂಜಿನ್ ಆಯಿಲ್ ತಂದು ಅವರ ಮುಖಕ್ಕೆ ಎರಚುತ್ತಿದ್ಗದರು. ಅವರನ್ನು ಬೀದಿಯಲ್ಲಿ ಕೆಡವಿ ಥಳಿಸಲು ಯತ್ನಿಸುತ್ತಿದ್ದರು. ಯಾಕೆಂದರೆ ಜನರಿಗೆ ಗೌರವ ನೀಡಿ. ಮಾನವೀಯತೆ ತುಂಬಾ ಮುಖ್ಯ ಎಂದು ವಿವೇಕಾನಂದ ಅವರು ಹೇಳಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಅವರ ಮೇಲೂ ದಾಳಿ ನಡೆಸುತ್ತಿದ್ದರು ಎಂದು ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಪಾಲ್ಗೊಂಡಿದ್ದರು. ಇದೀಗ ಶಶಿ ತರೂರ್ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಸ್ವಾಮಿ ಅಗ್ನಿವೇಶ್
ಇದೇ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್, ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದು, ಹಿಂದುತ್ವವನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಅಂತೆಯೇ ಶಬರಿಮಲೆ ವಿಷಯದಲ್ಲಿ ರಾಜ್ಯಸರಕಾರದ ನಿಲುವನ್ನು ಬೆಂಬಲಿಸುತ್ತೇನೆ. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶವನ್ನು ಬೆಂಬಲಿಸುತ್ತೇನೆ. ಮಹಿಳೆಯರಿಗೆ ಸಮಾನತೆ ಇರಬೇಕು ಎಂದು ಹೇಳಿದರು.
ಜಾರ್ಖಂಡ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದಾಗ ಅಗ್ನಿವೇಶ್‍ ರನ್ನು ಥಳಿಸಲಾಗಿತ್ತು.
SCROLL FOR NEXT