ದೇಶ

ರಕ್ಷಣಾ ಸಚಿವರ ಜತೆ ಭಿನ್ನಮತ: ರಾಜ್ಯಸಭೆಯಲ್ಲಿ ಎಐಎಡಿಎಂಕೆ ಸಂಸದರಿಂದ ಬಿಜೆಪಿ ವಿರುದ್ಧ ಮತ?

Raghavendra Adiga
ನವದೆಹಲಿ: ಆಗಸ್ಟ್ 9ರಂದು ನಡೆಯುವ ರಾಜ್ಯಸಭೆ ಉಪಾಧ್ಯಕ್ಷರ ಚುನವಣೆ ಬಿಜೆಪಿಗೆ ತಾನು ನಿರೀಕ್ಷಿಸಿದ್ದಕ್ಕಿಂತ ಕಠಿಣವಾಗಿರುವ ಸಾಧ್ಯತೆ ಇದೆ. ಮೇಲ್ಮನೆಯಲ್ಲಿ 13 ಸಂಸದರನ್ನು ಹೊಂದಿರುವ ಎಐಎಡಿಎಂಕೆ ಆಡಳಿತ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಬಹುದು ಎಂಬ ಸುದ್ದಿ ಇದಕ್ಕೆ ಪುಷ್ಟಿ ಒದಗಿಸುತ್ತಿದೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕಡೆಗೆ ಅನುಕೂಲಕರವಾಗಿ ಒಲವು ತೋರುವ ಎಐಎಡಿಎಂಕೆ ಇತ್ತೀಚೆಗೆ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರನ್ನು "ಅನುಚಿತ"ವಾಗಿ ನಡೆಸಿಕೊಂಡ  ಬಳಿಕ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎನ್ನಲಾಗಿದೆ.
ಇದೇ ಜುಲೈ 24ರಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಎಐಎಡಿಎಂಕೆ ನಾಯಕ ಡಾ. ವಿ. ಮೈತ್ರೇಯನ್ ಅವರೊಡನೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗಾಗಿ ಅವರ ಸೌಥ್ ಬ್ಲಾಕ್ ಕಛೇರಿಗೆ ತೆರಳಿದ್ದರು. ಆದರೆ ಸೀತಾರಾಮನ್ ಅವರನ್ನು ವ್ಯರ್ಥವಾಗಿ ಕಾಯುವಂತೆ ಮಾಡಿದರಲ್ಲದೆ ಭೇಟಿಯಾಗಲಿಲ್ಲ. ಅಂದು ಸಂಜೆ ಚೆನ್ನೈ ವೊಮಾನ ನಿಲ್ದಾಣದಲ್ಲಿ ಮಾತನಾಡಿದ ಪನ್ನೀರ್ ಸೆಲ್ವಂ ಅಣ್ಣಾದೊರೈ ಹೇಳಿಕೆಯನ್ನು ಉಲ್ಲೇಖಿಸಿ "ಎಲ್ಲವನ್ನೂ ಎದುರಿಸುವುದಕ್ಕೆ ನಿನಗೆ ಕೆಚ್ಚೆದೆ ಅಗತ್ಯ" ಎಂದಿದ್ದರು.
ಆದರೆ ಈ ಹಿಂದೆ ಲೋಕಸಭೆಯಲ್ಲಿ ವಿಶ್ವಾಸ ಮತ ಯಾಚನೆ ಸಮಯದಲ್ಲಿ ಎನ್ ಡಿಎ ಮೈತ್ರಿಕೂಟದ ಪರ ಮತ ಹಾಕಿದ್ದ ಎಡಿಎಡಿಎಂಕೆಗೆ ಇದಾಗಿ ಕೆಲವೇ ದಿನಗಳಲ್ಲಿ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಪಿಎಸ್ ಅವರೊಡನೆ ಮಾತನಾಡಬೇಕು ಮತ್ತು ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಎಐಎಡಿಎಂಕೆನ 13 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಹೋಗಲಿವೆ ಎಂದು ಡಾ. ಮೈತ್ರೇಯನ್ ಹೇಳಿದ್ದಾರೆ.
ಹೀಗಾಗಿ ಈ ಭಿನ್ನಾಭಿಪ್ರಾಯಗಳೇನಾದರೂ ತಣ್ಣಗಾಗದಿದ್ದಲ್ಲಿ , ಎಲ್ಲ 13 ಸಂಸದರು ಆಡಳಿತ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸುತ್ತಾರೆ. ಪಕ್ಷವು ಅವರಿಗೆ ಆಡಳಿತ ಪಕ್ಷದ ವಿರುದ್ಧ ಮತ ಹಾಕಲು ವಿಪ್ ಜಾರಿಗೊಳಿಸಲಿದೆ ಎಂದು ಹೇಳಲಾಗಿದೆ.
SCROLL FOR NEXT