ಬಿಹಾರ ವಸತಿ ನಿಲಯ ಹಗರಣ: ನಿತೀಶ್ ಕುಮಾರ್ ಭೇಟಿ ಬೆನ್ನಲ್ಲೇ ರಾಜೀನಾಮೆ ನೀಡಿದ ಸಚಿವೆ ಮಂಜು ವರ್ಮ
ಪಾಟ್ನಾ: ಬಿಹಾರ ವಸತಿ ನಿಲಯದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದ ಪ್ರಕರಣದಲ್ಲಿ ಕೊನೆಗೂ ಸಚಿವರ ತಲೆದಂಡವಾಗಿದೆ.
ವಿಪಕ್ಷಗಳಷ್ಟೇ ಅಲ್ಲದೇ ಸರ್ಕಾರದ ಭಾಗವಾಗಿರುವ ಬಿಜೆಪಿ ಸಹ ಸಚಿವರ ರಾಜೀನಾಮೆ ಆಗ್ರಹಿಸಿದ್ದರೂ ಈ ವರೆಗೂ ಸಮಾಜ ಕಲ್ಯಾಣ ಸಚಿವರು ರಾಜೀನಾಮೆ ನೀಡಿರಲಿಲ್ಲ. ಒತ್ತಡ ಹೆಚ್ಚುತ್ತಿದ್ದಂತೆಯೇ ಮುಜುಗರಕ್ಕೊಳಗಾದ ಸಿಎಂ ನಿತೀಶ್ ಕುಮಾರ್ ಮಂಜು ವರ್ಮ ರಾಜೀನಾಮೆ ಅಂಗೀಕರಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ಕೆಲವೇ ನಿಮಿಷಗಳಲ್ಲಿ ಮಂಜು ವರ್ಮ ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆಗಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ ನಿತೀಶ್ ಕುಮಾರ್ ತಮ್ಮನ್ನು ಭೇಟಿ ಮಾಡಲು ಸಚಿವರಿಗೆ ಸೂಚಿಸಿದ್ದರು. ಭೇಟಿ ವೇಳೆ ರಾಜೀನಾಮೆ ನೀಡುವಂತೆ ನಿತೀಶ್ ಕುಮಾರ್ ಸೂಚನೆಯ ಹಿನ್ನೆಲೆಯಲ್ಲಿ ಮಂಜು ವರ್ಮಾ ರಾಜೀನಾಮೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಮಂಜು ವರ್ಮಾ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದ ನಿತೀಶ್ ಕುಮಾರ್, ಪ್ರಕರಣದಲ್ಲಿ ಸಚಿವರ ಪಾತ್ರ ಇರುವುದಕ್ಕೆ ಪುರಾವೆ ದೊರೆತ ತಕ್ಷಣ ಅವರು ರಾಜೀನಾಮೆ ನೀಡಲಿದ್ದಾರೆ ಎಂದಿದ್ದರು.
ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದ ವಸತಿ ನಿಲಯವನ್ನು ನಿರ್ವಹಣೆ ಮಾಡುತ್ತಿದ್ದ ಎನ್ ಜಿಒ ಮುಖ್ಯಸ್ಥ ಬ್ರಜೇಶ್ ಠಾಕೂರ್ ಅವರೊಂದಿಗೆ ಸಚಿವರ ಪತಿ ಚಂದೇಶ್ವರ್ ವರ್ಮ ನಿರಂತರ ಸಂಪರ್ಕದಲ್ಲಿದ್ದರು, ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೂ ಸಚಿವರ ಪತಿಗೂ ಸಂಬಂಧವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.