ದೇಶ

ರಾಫೆಲ್ ಒಪ್ಪಂದ ಅತಿ ದೊಡ್ಡ ಹಗರಣ: ಯಶ್ವಂತ್ ಸಿನ್ಹಾ, ಶೌರಿ

Srinivas Rao BV
ನವದೆಹಲಿ: ರಾಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳ ಆರೋಪಕ್ಕೆ ಬಿಜೆಪಿಯ ನಾಯಕರೂ ಧ್ವನಿಗೂಡಿಸಿದ್ದು, ರಾಫೆಲ್ ಒಪ್ಪಂದ  ಅತಿ ದೊಡ್ಡ ಹಗರಣ ಎಂದು ಯಶ್ವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ರಾಫೆಲ್ ಒಪ್ಪಂದವನ್ನು ಏಕಪಕ್ಷೀಯವಾಗಿ ನಿರ್ಧರಿಸಿದ್ದಾರೆ. ಇದರಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಪ್ರಕ್ರಿಯೆಗಳನ್ನು ಉಲ್ಲಂಘನೆ ಮಾಡಲಾಗಿದೆ, ಈಗ ನಡೆದಿರುವ ರಕ್ಷಣಾ ಹಗರಣಗಳಿಗಿಂತ ರಾಫೆಲ್ ಹಗರಣ ದೊಡ್ಡದು ಎಂದು ಅರುಣ್ ಶೌರಿ ಹಾಗೂ ಯಶ್ವಂತ್ ಸಿನ್ಹಾ ಆರೋಪಿಸಿದ್ದಾರೆ.
ಮಾಜಿ ಕೆಂದ್ರ ಸಚಿವರುಗಳ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಕೀಲ ಪ್ರಶಾಂತ್ ಭೂಷಣ್, ರಾಫೆಲ್ ಜೆಟ್ ಗಳಿಗಾಗಿನ ಆರ್ಡರ್ ನ್ನು ಬದಲಾವಣೆ ಮಾಡಿದ ಬೆನ್ನಲ್ಲೇ ಅಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ತನಿಖೆ ನಡೆಯಬೇಕೆಂದು ಬಿಜೆಪಿಯ ಮಾಜಿ ಕೇಂದ್ರ ಸಚಿವರು ಹಾಗೂ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
ಮೋದಿ ಸರ್ಕಾರ ಯುಪಿಎ ಸರ್ಕಾರ ಅಂತಿಮಗೊಳಿಸಿದ್ದ ಒಪ್ಪಂದವನ್ನೇ ಮುಂದುವರೆಸಿದ್ದರೆ ಈ ವೇಳೆಗೆ ಭಾರತಕ್ಕೆ 18 ರಾಫೆಲ್ ಜೆಟ್ ಗಳು ಸಿಕ್ಕಿರುತ್ತಿದ್ದವು ಉಳಿದ 108 ರಾಫೆಲ್ ಜೆಟ್ ಗಳು ಭಾರತದಲ್ಲಿ ಉತ್ಪಾದನೆಗೆ ತಯಾರಾಗಿರುತ್ತಿದ್ದವು. ಆದರೆ ಹೊಸ ಒಪ್ಪಂದದ ಪ್ರಕಾರ 36 ಜೆಟ್ ಗಳನ್ನು ಹೊಸ ಟೆಂಡರ್ ಗಳನ್ನು ಕರೆಯದೇ ಅಂತಿಮಗೊಳಿಸಲಾಗಿದೆ, ಇದರಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಶೌರಿ ಆರೋಪಿಸಿದ್ದಾರೆ. 
SCROLL FOR NEXT