ದೇಶ

ರಾಹುಲ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಬಿಜೆಪಿಯ ಉದ್ದೇಶಪೂರ್ವಕ ಯತ್ನ: ಆಪ್

Manjula VN
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ವಿರೋಧ ಪಕ್ಷಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ಆಮ್ ಆದ್ಮಿ ಪಕ್ಷ ನಾಯಕ ಹಾಗೂ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು ಗುರುವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಬಿಜೆಪಿ ಪ್ರಜ್ಞಾಪೂರ್ವಕ ಯತ್ನವಾಗಿದೆ. ಪ್ರಧಾನಮಂತ್ರಿ ಸ್ಥಾನಕ್ಕೆ ರಾಹುಲ್ ಹಾಗೂ ಮೋದಿ ನಡುವಿನ ಪೈಪೋಟಿ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ವಿರೋಧ ಪಕ್ಷಗಳಿಗೆ ದೊಡ್ಡ ಹೊಡೆತವಾಗಲಿದೆ ಎಂದು ಹೇಳಿದ್ದಾರೆ. 
ಮಾಯಾವತಿ ಅಥವಾ ಮಮತಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಸಮಸ್ಯೆಯಾಗುತ್ತದೆ. ರಾಹುಲ್ ಅವರು ಎಂದಿಗೂ ಸಚಿವರಾಗಲೀ ಅಥವಾ ಮುಖ್ಯಮಂತ್ರಿಯಾಗಿಲ್ಲ. ಪ್ರಧಾನಮಂತ್ರಿ ಹುದ್ದೆಗೆ ಮೋದಿ ಬಲಿಷ್ಠ ಅಭ್ಯರ್ಥಿಯೆಂದು ಬಿಜೆಪಿ ತೋರ್ಪಡಿಸುತ್ತಿದೆ. ಇದೀಗ ರಾಹುಲ್ ಅವರನ್ನು ಮೋದಿಯವರ ಪ್ರತಿಸ್ಪರ್ಧಿಯೆಂದು ಬಿಜೆಪಿ ಬಿಂಬಿಸುವ ಮೂಲಕ ಮೋದಿಯವರನ್ನು ಬಲಿಷ್ಠ ಅಭ್ಯರ್ಥಿಯಾಗಿಸುತ್ತಿದೆ. 
ಕಾಂಗ್ರೆಸ್ ಕೂಡ ತಮಗೆ ಈ ಸ್ಥಾನ ಒಪ್ಪುತ್ತದೆ ಎಂಬಂತೆ ಇಷ್ಟಪಡುತ್ತಿದೆ. ಈ ಹಿನ್ನಲೆಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಮೋದಿಯವರ ವಿರುದ್ಧ ಈ ಸ್ಥಾನ ಅವರಿಗೆ ಹೋಲಿಕೆಯಾಗುವುದಿಲ್ಲ. ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುವುದರಿಂದ ವಿರೋಧ ಪಕ್ಷಗಳಿಗೆ ದೊಡ್ಡ ನಷ್ಟವುಂಟಾಗಲಿದೆ. 
ಕಳೆದ ಮೂರು ತಿಂಗಳಿನಿಂದ ಮೋದಿ ಸೇರಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಮೇಲೆ ವಾಗ್ದಾಳಿ ನಡೆಸುತ್ತಿರುವುದು ಬಿಜೆಪಿ ಚುನಾವಣಾ ತಂತ್ರವಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ನಡುವೆಯಾಗಲಿದೆ. 
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನಡುವೆ ಪೈಪೊಟಿ ನಡೆಯಲಿದೆ. ಕಾಂಗ್ರೆಸ್ ಒಂದು ಸೀಟನ್ನು ಗೆಲ್ಲುವುದಿಲ್ಲ. ಮತಗಳ ಶೇಕಡಾವಾರು ಹೆಚ್ಚಾಗಬಹುದು. ಆದರೆ, ಅವರು ಗೆಲುವು ಸಾಧಿಸುವುದಿಲ್ಲ. ವಿರೋಧ ಪಕ್ಷಗಳ ಮೈತ್ರಿ ಪಕ್ಷದಲ್ಲಿ ಆಪ್ ಇರುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ನಾವು ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಯಾವ ಯೋಜನೆಯೂ ಇಲ್ಲ. ಇದನ್ನು ಸ್ಪಷ್ಟಪಡಿಸುತ್ತೇನೆಂದು ತಿಳಿಸಿದ್ದಾರೆ. 
SCROLL FOR NEXT