ನವದೆಹಲಿ: ತೀವ್ರ ಕುತೂಹಲ ಮೂಡಿಸಿರುವ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಗುರುವಾರ ಮತದಾನ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅಡ್ಡ ಮತದಾನ ತಡೆಯುವ ಸಲುವಾಗಿ ತಮ್ಮ ಪಕ್ಷದ ಸಂಸದರಿಗೆ ಬಿಜೆಪಿ ವಿಪ್ ಜಾರಿಗೊಳಿಸಿದೆ.
ಚುನಾವಣೆ ಹಿನ್ನಲೆಯಲ್ಲಿ ರಾಜ್ಯಸಭೆಗೆ ಹಾಜರಾಗುವಂತೆ ಹಾಗೂ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುವಂತೆ ಬಿಜೆಪಿ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್'ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪ್ರತಿಪಕ್,ದ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಅವರು ಸೆಣಸಲಿದ್ದಾರೆ.
ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಚುನಾವಣೆ ನಡೆಯಲಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಮತದಾನ ನಿಗದಿಯಾಗಿದೆ.
ಉಭಯ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷಗಳಿಂದ ಎನ್'ಸಿಪಿ ಸಂಸದೆ ವಂದನಾ ಚವಾಣ್ ಅಭ್ಯರ್ಥಿಯಾಗಬಹುದು ಎನ್ನಲಾಗಿತ್ತಾದರೂ ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೂಚಿಸಿದ ಅಭ್ಯರ್ಥಿಯಾಗಿ ಹರಿಪ್ರಸಾದ್ ಹೊರಹೊಮ್ಮಿದರು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್'ಡಿಎಗೆ ಬಹುಮತವಿಲ್ಲ. ಹೀಗಾಗಿ ಅನ್ಯಪಕ್ಷಗಳನ್ನು ಅದು ನೆಚ್ಚಿಕೊಂಡಿದೆ. ಎನ್'ಡಿಎಗೆ ಬಹುಮತವಿಲ್ಲ ಎಂಬುದನ್ನೇ ಪ್ರತಿಪಕ್ಷಗಳ ಕೂಟವು ಬಂಡವಾಳ ಮಾಡಿಕೊಂಡಿದೆ. ಬಹುಮತಕ್ಕೆ 123 ಸದಸ್ಯ ಬಲ ಬೇಕು. ಆದರೆ, ಎನ್'ಡಿಎಗೆ ಶಿವಸೇನೆ ಬೆಂಬಲ ಘೋಷಣೆ ಮಾಡಿದೆ. ಜೊತೆಗೆ ಬಿಜು ಜನತಾದಳ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಕೂಡ ಬೆಂಬಲ ನೀಡುವ ಸಾಧ್ಯತೆಗಳಿವೆ. ಹೀಗಾಗಿ ತನ್ನ ಬಳಿ 129 ಮತಗಳಿವೆ ಎಂದು ಎನ್'ಡಿಎ ಹೇಳಿಕೊಳ್ಳುತ್ತಿದ್ದು, ಜಯದ ವಿಶ್ವಾಸ ವ್ಯಕ್ತಪಡಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos