ಕಣ್ಸನ್ನೆ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಬಿಡುವಾದಾಗ ವಾಸ್ತವಾಂಶಗಳನ್ನು ಓದಿ: ರಾಹುಲ್ ಗೆ ಅಮಿತ್ ಶಾ
ನವದೆಹಲಿ: ಎಸ್ ಸಿ/ಎಸ್ ಟಿ ದೌರ್ಜನ್ಯ ಕಾಯ್ದೆ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಾಸ್ತವಾಂಶ ತಿಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಸಂಸತ್ ನಲ್ಲಿ ಕಣ್ಸನ್ನೆ ಮಾಡಿದ್ದನ್ನು ನೆನಪಿಸಿಕೊಂಡಿರುವ ಅಮಿತ್ ಶಾ, ಕಣ್ಸನ್ನೆ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಬಿಡುವು ಸಿಕ್ಕಾಗ ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಸಮಯ ವ್ಯಯಿಸಿ ಎಂದು ಹೇಳಿದ್ದಾರೆ. ಎನ್ ಡಿಎ ಸರ್ಕಾರದ ಸಚಿವ ಸಂಪುಟ ಎಸ್ ಸಿ/ಎಸ್ ಟಿ ದೌರ್ಜನ್ಯ ಕಾಯ್ದೆಯ ಮೂಲ ನಿಬಂಧನೆಗಳನ್ನು ಮತ್ತೆ ಜಾರಿಗೆ ತರಲು ಕ್ರಮ ಕೈಗೊಂಡಿದೆ, ಅದನ್ಯಾಕೆ ಪ್ರತಿಭಟಿಸುತ್ತಿದ್ದೀರಾ? ಕಣ್ಸನ್ನೆ ಮಾಡುವುದು, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಬಿಡುವು ಮಾಡಿಕೊಂಡು ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಸಮಯ ನೀಡಿ ರಾಹುಲ್ ಗಾಂಧಿ ಎಂದು ಅಮಿತ್ ಶಾ ಹೇಳಿದ್ದಾರೆ.
ಮಿಸ್ಟರ್ ರಾಹುಲ್ ಗಾಂಧಿ, ಸಂಶೋಧನೆ ಹಾಗೂ ಪ್ರಾಮಾಣಿಕತೆಯನ್ನು ನಿಮ್ಮಿಂದ ನಿರೀಕ್ಷಿಸುವುದು ಕಷ್ಟ ಎಂಬುದು ತಿಳಿದಿದೆ, ಆದರೆ ಮಂಡಲ್ ಆಯೋಗದ ವರದಿಯ ಸಂದರ್ಭದಲ್ಲಿನ ರಾಜೀವ್ ಗಾಂಧಿ ಅವರ ಭಾಷಣವನ್ನು ಓದಿ, ಅದರಲ್ಲಿ ಹಿಂದುಳಿದ ಸಮುದಾಯದ ವಿರುದ್ಧ ಎಷ್ಟು ದ್ವೇಷವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಆದರೆ ನೀವು ಇಂದು ದಲಿತರ ಸಬಲೀಕರಣ, ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ.