ದೇಶ

ಕೇರಳ: 50 ವರ್ಷಗಳಲ್ಲೇ ಅತ್ಯಂತ ದೊಡ್ಡ ಮಳೆ ಅನಾಹುತ, 27ಕ್ಕೇರಿದ ಸಾವಿನ ಸಂಖ್ಯೆ

Srinivasamurthy VN
ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. 
ಈ ಬಗ್ಗೆ ಸಚಿವ ಕೆಜೆ ಅಲ್ಫಾನ್ಸೋ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೇರಳದ ವಿವಿಧೆಡೆ ಸಂಭವಿಸಿದ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇಡುಕ್ಕಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಭೂಕುಸಿತ, ಪ್ರವಾಹದಲ್ಲಿ ಕೊಚ್ಚಿ ಹೋಗುವಿಕೆ. ಗೋಡೆ ಕುಸಿತದಂತಹ ವಿವಿಧ ಪ್ರಕರಣಗಳಲ್ಲಿ ಇಲ್ಲಿ ಒಟ್ಟು 11 ಮಂದಿ ಸಾವಿಗೀಡಾಗಿದ್ದಾರೆ. 
ಇನ್ನು ಭಾರಿ ಮಳೆ ತತ್ತರಿಸಿರುವ ಕೇರಳದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಕಲ್ಲಿಕೋಟೆ, ವಯನಾಡ್, ಪಾಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಇಲ್ಲಿನ ಖ್ಯಾತ ನೆಹರೂ ಬೋಟ್ ರೇಸ್ ಅನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇನ್ನು ಕೇರಳದಲ್ಲಿ ಮುಂಗಾರು ಮಳೆಗೆ ಜನತೆ ತತ್ತರಿಸಿ ಹೋಗಿದ್ದು, ಕಳೆದೆರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಇಡುಕ್ಕಿ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಅಂದರೆ ಕಳೆದೆರಡು ದಿನಗಳಲ್ಲಿ 128.6 ಮಿಮಿ ಮತ್ತು 124 ಮಿಮೀ ಮಳೆಯಾಗಿದ್ದು, ತೋಡುಪುಳಾ ಮತ್ತು ಮುನ್ನಾರ್ ನಲ್ಲಿ 107.3 ಮತ್ತು 54.2 ಮಿ.ಮೀ ಮಳೆಯಾಗಿದೆ. ಪರಿಣಾಮ ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ತಲೆದೋರಿದೆ. 
50 ವರ್ಷಗಳಲ್ಲೇ ಅತ್ಯಂತ ದೊಡ್ಡ ಮಳೆ ಅನಾಹುತ
ಪ್ರಸ್ತುತ ಕೇರಳದಲ್ಲಿ ಉಂಟಾಗಿರುವ ಮಳೆ ಸಂಬಂಧಿತ ಅನಾಹುತ ಕಳೆದ 50 ವರ್ಷಗಳಲ್ಲೇ ಅತ್ಯಂತ ದೊಡ್ಡ ಅನಾಹುತ ಎಂದು ತಜ್ಞರು ಹೇಳಿದ್ದಾರೆ. 50 ವರ್ಷಗಳಲ್ಲೇ ಕೇರಳದಲ್ಲಿ ಮುಂಗಾರು ಭಾರಿ ಪ್ರಮಾಣದಲ್ಲಿ ಬೀಳುತ್ತಿದ್ದು, ಮಳೆಗಾಲದ ಆರಂಭದಲ್ಲೇ ಇಷ್ಟು ದೊಡ್ಡ ಅನಾಹುತ ಸಂಭವಿಸಿರುವುದು ಇದೇ ಮೊದಲು ಎಂದು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT